ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಬ್ಬರು ಪುಟ್ಟ ಮಕ್ಕಳ ದಾರುಣ ಸಾವು

ಬೆಂಗಳೂರು ನಗರದ ನಾರಾಯಣಪುರದಲ್ಲಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಬ್ಬರು ಪುಟ್ಟ ಮಕ್ಕಳು ಸಜೀವ ದಹನಗೊಂಡಿರುವ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಂಕಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ

ಬೆಂಗಳೂರು: ನಗರದ ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ಸಂಭವಿಸಿದ ಬೆಂಕಿ ಅವಘಡ ಇಬ್ಬರು ಪುಟ್ಟ ಮಕ್ಕಳ ಪ್ರಾಣ ಕಸಿದುಕೊಂಡಿದೆ. ಅರ್ಜುನ್ (5) ಮತ್ತು ಆಶಾ (3) ಮೃತ ಮಕ್ಕಳಾಗಿದ್ದು, ಶೆಡ್‌ನಲ್ಲಿ ಸಿಲುಕಿ ಸಜೀವ ದಹನಗೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ದುರ್ಗಪ್ಪ ಹಾಗೂ ಸಾವಿತ್ರಿ ದಂಪತಿ ಕಳೆದ ಆರು ತಿಂಗಳಿಂದ ನಾರಾಯಣಪುರದ ಶೆಡ್‌ನಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಇಬ್ಬರೂ ಜೆಸಿಎಸ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಊರಿಗೆ ತೆರಳಿದ್ದರು. ಇಂದು ಮತ್ತೆ ಬೆಂಗಳೂರಿಗೆ ವಾಪಸ್ ಬಂದು ಕೆಲಸಕ್ಕೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ.

ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆತರುವುದು ಬೇಡ ಎಂದು ಮೇಸ್ತ್ರಿ ಸೂಚಿಸಿದ್ದ ಹಿನ್ನೆಲೆ, ತಾಯಿ ಮಕ್ಕಳನ್ನು ಅಜ್ಜಿಯ ಜೊತೆ ಶೆಡ್‌ನಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಅಜ್ಜಿ ಹೊರಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಅಜ್ಜಿ ಮರಳಿ ಬರುವಷ್ಟರಲ್ಲಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಒಳಗಿದ್ದ ಮಕ್ಕಳು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಇಬ್ಬರೂ ಮಕ್ಕಳು ಸಾವನ್ನಪ್ಪಿದ್ದಾರೆ. ಸ್ಥಳೀಯರು ಬೆಂಕಿ ಆರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಘಟನೆ ಕುರಿತು ಮಾಹಿತಿ ಪಡೆದ ಕೊತ್ತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ತಗುಲಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories