ದಸರಾ ನೋಡಿ ಬರುವಾಗ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ; ಇಬ್ಬರು ಯುವಕರು ಸಾವು
ಮೈಸೂರು ದಸರಾ ಜಂಬೂ ಸವಾರಿ ವೀಕ್ಷಿಸಿ ಬೆಂಗಳೂರಿಗೆ ಬೈಕ್‌ನಲ್ಲಿ ಮರಳುತ್ತಿದ್ದ ಇಬ್ಬರು ಯುವಕರು ಮೈಸೂರು ರಸ್ತೆಯ ಮೈಲಸಂದ್ರ ಜಂಕ್ಷನ್ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.
ಬೆಂಗಳೂರು (Bengaluru): ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಂಡು ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಇಬ್ಬರು ಯುವಕರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಮೈಸೂರು ರಸ್ತೆಯ ಮೈಲಸಂದ್ರ ಜಂಕ್ಷನ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ.
ಮೃತರನ್ನು ಗೊರಗುಂಟೆಪಾಳ್ಯದ ರಜತ್ (21) ಮತ್ತು ಶಿವಮೊಗ್ಗ ಮೂಲದ ನಾಗೇಂದ್ರ (20) ಎಂದು ಗುರುತಿಸಲಾಗಿದೆ. ಗುರುವಾರ ಮುಂಜಾನೆ ಸುಮಾರು 3 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಜತ್ ಬೆಂಗಳೂರಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಡಿಪ್ಲೊಮಾ ವ್ಯಾಸಂಗ ಮುಗಿಸಿದ್ದ ನಾಗೇಂದ್ರ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರು. ಇಬ್ಬರೂ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಲು ತೆರಳಿದ್ದರು.
ಇದನ್ನೂ ಓದಿ: ಬೆಂಗಳೂರು: ಗುಜರಿ ಗೋದಾಮಿನಲ್ಲಿ ಬೆಂಕಿ ಅವಘಡ; ಒಳಗಡೆ ಮಲಗಿದ್ದ ವ್ಯಕ್ತಿ ಸಜೀವ ದಹನ
ಎರಡು ದಿನಗಳ ಹಿಂದೆ ನಾಲ್ವರು ಸ್ನೇಹಿತರು ಎರಡು ಬೈಕ್‌ಗಳಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ಬುಧವಾರ ಜಂಬೂ ಸವಾರಿ ವೀಕ್ಷಿಸಿದ ಬಳಿಕ ತಡರಾತ್ರಿ ಬೆಂಗಳೂರಿನತ್ತ ವಾಪಸ್ ಹೊರಟಿದ್ದರು. ಈ ವೇಳೆ ರಜತ್ ಮತ್ತು ನಾಗೇಂದ್ರ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಮೈಲಸಂದ್ರ ಜಂಕ್ಷನ್ ಸಮೀಪ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು.
ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ದಸರಾ ಸಂಭ್ರಮದ ಬಳಿಕ ಮನೆಗೆ ಮರಳಬೇಕಿದ್ದ ಯುವಕರು ದಾರಿಯಲ್ಲೇ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



