ಬೆಂಗಳೂರು: 7ನೇ ಮಹಡಿಯಿಂದ ಬಿದ್ದು 23 ವರ್ಷದ ಯುವತಿ ಸಾವು, ಬಾಯ್ ಫ್ರೆಂಡ್ ಸ್ಥಿತಿ ಗಂಭೀರ!
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಪಿಜಿ ಕಟ್ಟಡದ ಏಳನೇ ಮಹಡಿಯಿಂದ ಬಿದ್ದು 23 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಮೃತಪಟ್ಟಿದ್ದು, ಆಕೆಯ ಪ್ರಿಯಕರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು (Bengaluru), ಆಗಸ್ಟ್ 31: ವೈಟ್ಫೀಲ್ಡ್ ಪೊಲೀಸ್ ಠಾಣಾ (Whitefield Police) ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಪಿಜಿ ವಸತಿಗೃಹದ ಏಳನೇ ಮಹಡಿಯಿಂದ ಬಿದ್ದು 23 ವರ್ಷದ ಯುವತಿ ಮೃತಪಟ್ಟಿದ್ದು, ಅವರೊಂದಿಗೆ ಇದ್ದ ಪ್ರಿಯಕರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಯುವತಿಯನ್ನು ಜನನಿ ಎಂದು ಗುರುತಿಸಲಾಗಿದೆ. ಅವರು ಕಳೆದ ಎಂಟು ತಿಂಗಳಿಂದ ವೈಟ್ಫೀಲ್ಡ್ನ ಇಸಿಸಿ ರಸ್ತೆಯಲ್ಲಿರುವ ರಾಧಾಕೃಷ್ಣ ಕೋ-ಲೈವ್ ಪಿಜಿಯಲ್ಲಿ (PG) ವಾಸವಾಗಿದ್ದರು. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಜನನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಘಟನೆಯಲ್ಲಿ ಗಾಯಗೊಂಡಿರುವ ಮಾಣಿಕ್ಯವೇಲು (30) ಪುದುಚೇರಿಯ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜನನಿ ಮತ್ತು ಮಾಣಿಕ್ಯವೇಲು ಇಬ್ಬರೂ ಪುದುಚೇರಿಯವರಾಗಿದ್ದು, ಕಳೆದ ಆರು ವರ್ಷಗಳಿಂದ ಪರಸ್ಪರ ಪರಿಚಯ ಹಾಗೂ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಜನನಿಯನ್ನು ಭೇಟಿಯಾಗಲು ಮಾಣಿಕ್ಯವೇಲು ಬೆಂಗಳೂರಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಇಬ್ಬರೂ ಪಿಜಿ ಕಟ್ಟಡದ ಏಳನೇ ಮಹಡಿಗೆ ತೆರಳಿದ್ದರು. ಅಲ್ಲಿಂದ ಕೆಳಗೆ ಬಿದ್ದ ಪರಿಣಾಮ ಜನನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಣಿಕ್ಯವೇಲು ಗಂಭೀರವಾಗಿ ಗಾಯಗೊಂಡಿದ್ದು, ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವೈಟ್ಫೀಲ್ಡ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜನನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕಳುಹಿಸಲಾಗಿದೆ. ಎರಡೂ ಕುಟುಂಬಗಳಿಗೂ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
ಈ ಜೋಡಿ ಇಂತಹ ತೀವ್ರ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಘಟನೆಯ ಹಿಂದಿನ ಪರಿಸ್ಥಿತಿ ಹಾಗೂ ಕಾರಣ ತಿಳಿಯಲು ಪೊಲೀಸರು ತನಿಖೆ (Police Investigation) ಮುಂದುವರಿಸಿದ್ದಾರೆ.



