ಬೆಂಗಳೂರು ಬನ್ನೇರುಘಟ್ಟದಲ್ಲಿ ಯುವಕನನ್ನು ಹೊಡೆದು ಕೊಂದ ಆರೋಪಿಗಳು ಅರೆಸ್ಟ್
ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಊಟದ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಾಗಿ ಅಂತ್ಯಗೊಂಡಿದೆ. 23 ವರ್ಷದ ಯುವಕನ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಯಿಂದ ದಾಳಿ ನಡೆಸಿ ಕೊಂದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ಗ್ರಾಮಾಂತರ ಭಾಗದ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಪನಾಯಕನಹಳ್ಳಿ ನಿವಾಸಿ ತಿಲಕ್ (23) ಅಲಿಯಾಸ್ ಗುಡ್ಡೆ ಎಂಬ ಯುವಕನನ್ನು ಕ್ರೂರವಾಗಿ ಹೊಡೆದು ಕೊಲೆ ಮಾಡಲಾಗಿದೆ.
ಮಾರ್ಚ್ 8ರಂದು ರಾತ್ರಿ ಈ ಘಟನೆ ನಡೆದಿದ್ದು, ಗೊಲ್ಲಹಳ್ಳಿ ಗುಟ್ಟೆ ಮೈದಾನ ಸಮೀಪದಲ್ಲಿ ತಿಲಕ್ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಯಿಂದ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಊಟದ ವಿಚಾರವೇ ಗಲಾಟೆಗೆ ಕಾರಣ
ತನಿಖೆ ವೇಳೆ ಹೊರಬಂದ ಮಾಹಿತಿಯ ಪ್ರಕಾರ, ಪ್ರಮುಖ ಆರೋಪಿ ಅಜಯ್ ಕುಮಾರ್ ತನ್ನ ಸ್ನೇಹಿತ ತಿಲಕ್ಗೆ ಊಟ ತರಲು ಹೇಳಿದ್ದಾನೆ. ಆದರೆ ತಿಲಕ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದರಿಂದ ಇದರಿಂದ ಅಜಯ್ ಆಕ್ರೋಶಗೊಂಡಿದ್ದಾನೆ ಎನ್ನಲಾಗಿದೆ.
ನಂತರ ತಿಲಕ್ ಅಲ್ಲಿಗೆ ಬಂದಾಗ “ಹುಡುಗಿಯೇ ಮುಖ್ಯವೇ?” ಎಂದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಹಿಂಸಾತ್ಮಕ ರೂಪ ಪಡೆದಿದ್ದು, ಆರೋಪಿಗಳು ಸೇರಿ ತಿಲಕ್ ಮೇಲೆ ದಾಳಿ ನಡೆಸಿದ್ದಾರೆ.
ಕಾಡಿನಲ್ಲಿ ತಂಗುತ್ತಿದ್ದ ಪ್ರಮುಖ ಆರೋಪಿ
ಈ ಪ್ರಕರಣದಲ್ಲಿ ಬಂಧಿತರಾದವರು ಕೆಂಪನಾಯಕನಹಳ್ಳಿ ನಿವಾಸಿಗಳಾದ ಅಜಯ್ ಕುಮಾರ್ (25), ರವಿಚಂದ್ರ ನಾಯಕ್ ಅಲಿಯಾಸ್ ಪಾಯಿಸನ್ ರವಿ (24), ಸಂಜಯ್ ಅಲಿಯಾಸ್ ನಾಯಿಬಾಬಾ (26) ಹಾಗೂ ಮೊಹಮ್ಮದ್ ರಜಾಕ್ (24) ಎಂದು ಪೊಲೀಸರು ತಿಳಿಸಿದ್ದಾರೆ.
ಇವರಲ್ಲಿ ಪ್ರಮುಖ ಆರೋಪಿ ಅಜಯ್ ಕುಮಾರ್ ವಿರುದ್ಧ ಈಗಾಗಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಅವನು ಹೆಚ್ಚು ಸಮಯ ಕಾಡಿನಲ್ಲಿ ತಂಗುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಕುಡಿದ ಮತ್ತಿನಲ್ಲಿ ದಾಳಿ
ಘಟನೆ ನಡೆದ ದಿನ ಆರೋಪಿಗಳು ಮದ್ಯಪಾನ ಮಾಡಿದ್ದರೆಂಬ ಶಂಕೆಯೂ ವ್ಯಕ್ತವಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳ ಕ್ಷಣಾರ್ಧದಲ್ಲಿ ನಿಯಂತ್ರಣ ತಪ್ಪಿ ಕೊಲೆಯಾಗಿ ಪರಿಣಮಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇನ್ನೂ ಹೆಚ್ಚಿನ ವಿಚಾರಣೆ ಮುಂದುವರಿದಿದೆ.



