ಆಧಾರ್ನಲ್ಲಿ ಮೂರು ಹೊಸ ನಿಯಮಗಳು! 2025ರ ಪ್ರಮುಖ ಬದಲಾವಣೆಗಳು ಇವು
UIDAI ಆಧಾರ್ ಕಾರ್ಡಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಶುಲ್ಕ ಬದಲಾವಣೆ, ಡಿಜಿಟಲ್ ಆಧಾರ್ ಬಳಕೆ ಮತ್ತು ಮನೆಯಿಂದಲೇ ಅಪ್ಡೇಟ್ ಸೌಲಭ್ಯಗಳು ಈ ವರ್ಷ ಜನರಿಗೆ ಲಭ್ಯವಾಗಿವೆ ಎಂಬುದು ಸಾರ್ವಜನಿಕರಿಗೆ ಮಹತ್ವದ ಮಾಹಿತಿ ಆಗಿದೆ ಎಂದು UIDAI ಸ್ಪಷ್ಟಪಡಿಸಿದೆ
- ಹಲವು ಆಧಾರ್ ಕಾರ್ಡ್ ಹೊಸ ನಿಯಮಗಳು ಜಾರಿ
- ಆಧಾರ್ ಅಪ್ಡೇಟ್ ಶುಲ್ಕ ಹೆಚ್ಚಳಕ್ಕೆ UIDAI ನಿರ್ಧಾರ
- ಡಿಜಿಟಲ್ ಆಧಾರ್, ಮನೆಯಿಂದಲೇ ಅಪ್ಡೇಟ್ ಸೌಲಭ್ಯ
Aadhaar Card: ಭಾರತದಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಪ್ರಮುಖ ಸರ್ಕಾರಿ ಸೇವೆ ಪಡೆಯುವುದು ಕಷ್ಟ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭವರೆಗೆ ಎಲ್ಲೆಡೆ ಆಧಾರ್ ಅನಿವಾರ್ಯವಾಗಿದೆ. ಇಂತಹ ಪ್ರಮುಖ ದಾಖಲೆ ಸಂಬಂಧ 2025ರಲ್ಲಿ ಮಹತ್ವದ ಬದಲಾವಣೆಗಳು ಜಾರಿಯಾಗಿವೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಡಿಜಿಟಲ್ ಬಳಕೆಯನ್ನು ಉತ್ತೇಜಿಸುವ ಜೊತೆಗೆ, ಜನರಿಗೆ ಸುಲಭವಾಗುವಂತೆ ಸೇವಾ ಪ್ರಕ್ರಿಯೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ಆಧಾರ್ ಅಪ್ಡೇಟ್ ಶುಲ್ಕದಲ್ಲಿ ಬದಲಾವಣೆ
ಇದುವರೆಗೆ ಆಧಾರ್ನಲ್ಲಿ ಬಯೋಮೆಟ್ರಿಕ್ ವಿವರಗಳನ್ನು ಅಪ್ಡೇಟ್ ಮಾಡಲು ರೂ.100 ಶುಲ್ಕ ಇತ್ತು. 2025ರಿಂದ ಈ ಶುಲ್ಕವನ್ನು ರೂ.125ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಲು ರೂ.50 ಇದ್ದ ಶುಲ್ಕವನ್ನು ರೂ.75ಕ್ಕೆ ಪರಿಷ್ಕರಿಸಲಾಗಿದೆ. ವ್ಯವಸ್ಥೆಯ ನಿರ್ವಹಣೆ ಮತ್ತು ಗುಣಮಟ್ಟ ಸುಧಾರಣೆಯೇ ಈ ನಿರ್ಧಾರಕ್ಕೆ ಕಾರಣವೆಂದು UIDAI ತಿಳಿಸಿದೆ.
ಹೊಸ ಡಿಜಿಟಲ್ ಆಧಾರ್ ಆ್ಯಪ್
ಭೌತಿಕ ಆಧಾರ್ ಕಾರ್ಡ್ ಕಡ್ಡಾಯವಿಲ್ಲದೆ ಪರಿಶೀಲನೆ ಸಾಧ್ಯವಾಗುವಂತೆ UIDAI ಹೊಸ ಸೂಪರ್ ಸೆಕ್ಯೂರ್ ಡಿಜಿಟಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ನಲ್ಲಿ ಡಿಜಿಟಲ್ ಆಧಾರ್ ಲಭ್ಯವಿದ್ದು, ಜೆರಾಕ್ಸ್ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ. ಮೊಬೈಲ್ನಲ್ಲೇ ಆಧಾರ್ ತೋರಿಸಿ ದೃಢೀಕರಣ ಮಾಡಬಹುದು.
ಮನೆಯಿಂದಲೇ ಮೊಬೈಲ್ ನಂಬರ್ ಅಪ್ಡೇಟ್
ಹಿಂದೆ ಮೊಬೈಲ್ ಸಂಖ್ಯೆ ಬದಲಾವಣೆಗೆ ಆಧಾರ್ ಕೇಂದ್ರಕ್ಕೆ ತೆರಳಿ ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಬೇಕಿತ್ತು. ಇದೀಗ 2025ರಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಸೌಲಭ್ಯವನ್ನು UIDAI ಒದಗಿಸಿದೆ. ಇದರಿಂದ ಸಾರ್ವಜನಿಕರಿಗೆ ಸಮಯ ಮತ್ತು ಶ್ರಮ ಎರಡೂ ಉಳಿಯಲಿದೆ.



