Flipkart Minutes ಈಗ ಪ್ರತ್ಯೇಕ App ರೂಪದಲ್ಲಿ ಲಭ್ಯ! ಜೆಪ್ಟೋ, ಬ್ಲಿಂಕಿಟ್‌ಗೆ ಸ್ಪರ್ಧೆ
ಫ್ಲಿಪ್‌ಕಾರ್ಟ್ ಹೊಸ Minutes App ಬಿಡುಗಡೆ ಮಾಡಿದ್ದು, ದಿನಸಿ, ಹಣ್ಣು, ತರಕಾರಿ ಸೇರಿದಂತೆ ಸಾವಿರಾರು ವಸ್ತುಗಳನ್ನು ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಿದೆ.

- ಫ್ಲಿಪ್‌ಕಾರ್ಟ್ ಮಿನಿಟ್ಸ್ ಈಗ ಪ್ರತ್ಯೇಕ App ರೂಪದಲ್ಲಿ ಲಭ್ಯ
- ಜೆಪ್ಟೋಗೆ ಟಕ್ಕರ್ ನೀಡಲು 10 ನಿಮಿಷ ಡೆಲಿವರಿ ಸೇವೆ
- Minutes App ಮೂಲಕ ದಿನಸಿ ಸೇರಿ ಹಲವು ಉತ್ಪನ್ನಗಳು
Flipkart Launches Minutes App: ಭಾರತದ ಕ್ವಿಕ್ ಕಾಮರ್ಸ್ (Quick Commerce) ಮಾರುಕಟ್ಟೆಯಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಬೆನ್ನಲ್ಲೇ, ಫ್ಲಿಪ್‌ಕಾರ್ಟ್ (Flipkart) ತನ್ನ ಹೊಸ ಹೆಜ್ಜೆಯನ್ನು ಇಟ್ಟಿದೆ. ಗ್ರಾಹಕರಿಗೆ ಇನ್ನಷ್ಟು ವೇಗವಾಗಿ ಸೇವೆ ತಲುಪಿಸಲು ಸಂಸ್ಥೆ ಇದೀಗ ಫ್ಲಿಪ್‌ಕಾರ್ಟ್ ಮಿನಿಟ್ಸ್ (Flipkart Minutes) ಹೆಸರಿನ ಪ್ರತ್ಯೇಕ ಆ್ಯಪ್ ಅನ್ನು ಪರಿಚಯಿಸಿದೆ.
ಇಲ್ಲಿಯವರೆಗೆ ಫ್ಲಿಪ್‌ಕಾರ್ಟ್‌ನ ಮುಖ್ಯ ಆ್ಯಪ್‌ನಲ್ಲೇ ಈ ಸೇವೆ ಲಭ್ಯವಿದ್ದರೂ, ಬಳಕೆದಾರರಿಗೆ ಸುಲಭ ಅನುಭವ (User Experience) ಒದಗಿಸಲು ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಆಂಡ್ರಾಯ್ಡ್ ಬಳಕೆದಾರರಿಗೆ ಈ ಆ್ಯಪ್ ಡೌನ್‌ಲೋಡ್‌ಗೆ ಲಭ್ಯವಾಗಿದೆ.
ಈ ಹೊಸ ಸೇವೆಯ ಮೂಲಕ ಹಣ್ಣುಗಳು, ತರಕಾರಿಗಳು, ಹಾಲು, ತಿಂಡಿ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು, ಕ್ಲೀನಿಂಗ್ ಉತ್ಪನ್ನಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಗ್ರಾಹಕರು ಆರ್ಡರ್ ಮಾಡಬಹುದು. ಜೊತೆಗೆ ಗ್ಯಾಜೆಟ್‌ಗಳು (Gadgets), ಸ್ಮಾರ್ಟ್‌ವಾಚ್‌ಗಳು (Smartwatches) ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನೂ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಹಕರಿಗೆ ಕೇವಲ 10 ನಿಮಿಷಗಳ ಒಳಗೆ ವಸ್ತುಗಳನ್ನು ತಲುಪಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದೇ ವೇಳೆ ಆಯ್ದ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಆಫರ್‌ಗಳನ್ನು ನೀಡುವುದಾಗಿ ಸಂಸ್ಥೆ ತಿಳಿಸಿದೆ. ವೇಗದ ಡೆಲಿವರಿ ಸೇವೆಗಾಗಿ ಕಂಪನಿ ತನ್ನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ.
ಪ್ರಸ್ತುತ ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಫ್ಲಿಪ್‌ಕಾರ್ಟ್ ತನ್ನ ಸೇವೆಯನ್ನು ವಿಸ್ತರಿಸಿದೆ. ಸಾವಿರಕ್ಕೂ ಅಧಿಕ ಡಾರ್ಕ್ ಸ್ಟೋರ್‌ಗಳನ್ನು (Dark Stores) ಸ್ಥಾಪಿಸಿರುವ ಸಂಸ್ಥೆ, ಗ್ರಾಹಕರಿಗೆ ತ್ವರಿತ ವಿತರಣೆಯನ್ನು ಖಚಿತಪಡಿಸಲು ದೊಡ್ಡ ಮಟ್ಟದ ಜಾಲವನ್ನು ನಿರ್ಮಿಸಿದೆ.
ಇದರಿಂದ ಈಗಾಗಲೇ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಪ್ಟೋ (Zepto), ಬ್ಲಿಂಕಿಟ್ (Blinkit) ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಕಂಪನಿಗಳಿಗೆ ಹೊಸ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಗ್ರಾಹಕರನ್ನು ಸೆಳೆಯಲು ಕಂಪನಿಗಳ ನಡುವೆ ಮತ್ತಷ್ಟು ಪೈಪೋಟಿ ಹೆಚ್ಚುವ ನಿರೀಕ್ಷೆಯಿದೆ.



