ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ! ತಕ್ಷಣದಿಂದಲೇ ಜಾರಿ
ಗೃಹ ಬಳಕೆಯ LPG ಸಿಲಿಂಡರ್ ಬುಕಿಂಗ್‌ಗೆ ಇದ್ದ ಕಾಯುವ ಅವಧಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು 25 ದಿನಗಳ ಅಂತರದಲ್ಲಿ ರೀಫಿಲ್ ಬುಕ್ ಮಾಡಬಹುದು.

- ಸಿಲಿಂಡರ್ ಬುಕಿಂಗ್ ಅವಧಿ 45ರಿಂದ 25 ದಿನಕ್ಕೆ ಇಳಿಕೆ
- ಗ್ರಾಮೀಣ ಪ್ರದೇಶದ ಗ್ರಾಹಕರಿಗೂ 25 ದಿನಗಳಲ್ಲೇ ಅವಕಾಶ
- ಸರ್ಕಾರದಿಂದ ಹೊಸ ನಿಯಮ ತಕ್ಷಣದಿಂದಲೇ ಜಾರಿ
ನವದೆಹಲಿ: ಗ್ಯಾಸ್ ಸಿಲಿಂಡರ್ (LPG Gas Cylinder) ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ರೀಫಿಲ್ ಬುಕ್ಕಿಂಗ್‌ಗೆ (Refill Booking) ಇದ್ದ ಅವಧಿಯನ್ನು 25 ದಿನಗಳಿಗೆ ನಿಗದಿಪಡಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಇದೀಗ ಒಂದೇ ನಿಯಮ ಅನ್ವಯವಾಗಲಿದೆ.
ಹಿಂದೆ ಪೂರೈಕೆಯ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರವನ್ನು ನಿಗದಿಪಡಿಸಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ಗ್ರಾಹಕರು ಮುಂದಿನ ಸಿಲಿಂಡರ್‌ಗಾಗಿ ಹೆಚ್ಚು ದಿನ ಕಾಯಬೇಕಾಗಿತ್ತು.
ಈಗ LPG ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ರೀಫಿಲ್‌ಗಳ ಬಾಕಿ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಹಿಂದಿನ ನಿರ್ಬಂಧವನ್ನು ಸಡಿಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ತಿಳಿಸಿದ್ದಾರೆ.
ಸೆಪ್ಟೆಂಬರ್ 7ರಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ದೇಶದ ಎಲ್ಲಾ ಗೃಹ ಬಳಕೆ LPG ಗ್ರಾಹಕರು, ಅವರು ನಗರದಲ್ಲಿರಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿರಲಿ, ಹಿಂದಿನ ಸಿಲಿಂಡರ್ ಬುಕ್ ಮಾಡಿದ 25 ದಿನಗಳ ಬಳಿಕ ಮತ್ತೊಂದು ರೀಫಿಲ್ ಬುಕ್ ಮಾಡಬಹುದಾಗಿದೆ.
ಈ ಬದಲಾವಣೆಯನ್ನು ತಕ್ಷಣದಿಂದ ಜಾರಿಗೆ ತರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಪೆಟ್ರೋಲಿಯಂ ಸಚಿವಾಲಯ ಸೂಚನೆ ನೀಡಿದೆ. ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಷ್ಕೃತ ನಿಯಮವನ್ನು ಏಕರೂಪವಾಗಿ ಜಾರಿಗೊಳಿಸಬೇಕಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದ LPG ಪೂರೈಕೆಯ ಮೇಲೆ ಒತ್ತಡ ಉಂಟಾದ ಸಂದರ್ಭದಲ್ಲಿ ಈ ನಿರ್ಬಂಧಗಳನ್ನು ಜಾರಿಗೆ ತರಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿರುವುದರಿಂದ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ 45 ದಿನಗಳ ಕಾಯುವಿಕೆ ತಪ್ಪಿ 25 ದಿನಗಳಲ್ಲೇ ಸಿಲಿಂಡರ್ ಬುಕ್ ಮಾಡುವ ಅವಕಾಶ ಸಿಕ್ಕಂತಾಗಿದೆ.



