LPG Gas Connection: 30 ದಿನಗಳ ಗಡುವು, ಡಬಲ್ ಗ್ಯಾಸ್ ಸಂಪರ್ಕ ಇದ್ದರೆ ಗ್ಯಾಸ್ ಕನೆಕ್ಷನ್ ಕಟ್!
LPG Gas Connection: ಪಿಎನ್‌ಜಿ ಮತ್ತು ಎಲ್‌ಪಿಜಿ ಎರಡೂ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸರ್ಕಾರ ಹೊಸ ಗಡುವು ನೀಡಿದೆ. ಹೆಚ್ಚುವರಿ ಸಂಪರ್ಕಗಳನ್ನು ರದ್ದುಪಡಿಸದಿದ್ದರೆ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
LPG Gas Connection Rules: ದೇಶದಲ್ಲಿ ಪೈಪ್ ಮೂಲಕ ನೈಸರ್ಗಿಕ ಅನಿಲ (PNG) ಬಳಕೆ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿರುವ ನಡುವೆ, ಎಲ್‌ಪಿಜಿ ಸಂಪರ್ಕಗಳ ಕುರಿತು ಹೊಸ ನಿಯಮಗಳು ಜಾರಿಯಾಗಿವೆ. ಪಿಎನ್‌ಜಿ ಸಂಪರ್ಕ ಹೊಂದಿರುವ ಕೆಲವು ಗ್ರಾಹಕರು ಹಳೆಯ ಎಲ್‌ಪಿಜಿ ಸಂಪರ್ಕವನ್ನೂ ಮುಂದುವರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಒಂದೇ ಕುಟುಂಬದಲ್ಲಿ ಅನಗತ್ಯವಾಗಿ ಎರಡು ಗ್ಯಾಸ್ ಸಂಪರ್ಕಗಳನ್ನು ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಜೂನ್ 1, 2026ರಿಂದ ಅನ್ವಯವಾಗುವಂತೆ 30 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಹೆಚ್ಚುವರಿ ಎಲ್‌ಪಿಜಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಬೇಕಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಗಂಡ-ಹೆಂಡತಿ, ಅವಿವಾಹಿತ ಮಕ್ಕಳು, ವಿವಾಹಿತ ಮಕ್ಕಳು ಹಾಗೂ ವಯೋವೃದ್ಧ ಪೋಷಕರು ಒಂದೇ ಅಡುಗೆಮನೆ ಬಳಸುತ್ತಿದ್ದರೆ, ಆ ಕುಟುಂಬಕ್ಕೆ ಕೇವಲ ಒಂದು ಎಲ್‌ಪಿಜಿ ಸಂಪರ್ಕ ಮಾತ್ರ ಮಾನ್ಯವಾಗಲಿದೆ. ಹೆಚ್ಚುವರಿ ಸಂಪರ್ಕಗಳು ಕಂಡುಬಂದರೆ ಅವುಗಳನ್ನು ರದ್ದುಪಡಿಸಬಹುದು.
ಸರ್ಕಾರದ ಮಾಹಿತಿಯ ಪ್ರಕಾರ, ಅನೇಕ ಕುಟುಂಬಗಳು ಪಿಎನ್‌ಜಿ ಸಂಪರ್ಕ ಪಡೆದ ನಂತರವೂ ಎಲ್‌ಪಿಜಿ ಸಿಲಿಂಡರ್ ಬಳಕೆಯನ್ನು ನಿಲ್ಲಿಸಿಲ್ಲ. ಇದರಿಂದ ಅನಿಲ ನಿರ್ವಹಣೆ ಮತ್ತು ಸಬ್ಸಿಡಿ ವಿತರಣೆಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ಗ್ರಾಹಕರು ಹೆಚ್ಚುವರಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ವಾಪಸ್ ನೀಡಿದರೆ, ಉಳಿದಿರುವ ಏಕೈಕ ಸಂಪರ್ಕವನ್ನು ಡಬಲ್ ಬಾಟಲ್ ವ್ಯವಸ್ಥೆಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶವೂ ಇರಬಹುದು. ಅಂದರೆ ಎರಡು ಸಿಲಿಂಡರ್‌ಗಳನ್ನು ಹೊಂದಿರುವ ಸಂಪರ್ಕವಾಗಿ ಪರಿವರ್ತಿಸಿಕೊಳ್ಳಬಹುದು.
ನಿಗದಿತ ಅವಧಿಯಲ್ಲಿ ಹೆಚ್ಚುವರಿ ಸಂಪರ್ಕಗಳನ್ನು ರದ್ದುಪಡಿಸದಿದ್ದರೆ, ಗ್ಯಾಸ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.



