ರೈತರಿಗೆ ಮುತ್ತು ಕೃಷಿಯಿಂದ ಲಕ್ಷಗಳ ಆದಾಯ! ಕಡಿಮೆ ಜಾಗ ಮತ್ತು ಸೀಮಿತ ಹೂಡಿಕೆ ಸಾಕು
ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯಲು ಬಯಸುವ ರೈತರಿಗೆ ಮುತ್ತು ಕೃಷಿ ಹೊಸ ಆಶಾಕಿರಣವಾಗಿದ್ದು, ಸರಿಯಾದ ತರಬೇತಿ ಮತ್ತು ನಿರ್ವಹಣೆಯಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಅವಕಾಶ ನೀಡುತ್ತಿದೆ.

Pearl Farming Business: ಸಾಂಪ್ರದಾಯಿಕ ಕೃಷಿಯಿಂದ ನಿರೀಕ್ಷಿತ ಆದಾಯ ಸಿಗದೇ ಕಂಗೆಟ್ಟಿರುವ ಅನೇಕ ರೈತರು ಇದೀಗ ಹೊಸ ಮಾರ್ಗಗಳತ್ತ ಮುಖ ಮಾಡುತ್ತಿದ್ದಾರೆ. ಅಂತಹ ಆಧುನಿಕ ಕೃಷಿ ವಿಧಾನಗಳಲ್ಲಿ ಮುತ್ತು ಕೃಷಿ ಕೂಡ ಒಂದು. ಕಡಿಮೆ ಜಾಗ ಮತ್ತು ಸೀಮಿತ ಹೂಡಿಕೆಯಲ್ಲಿ ಉತ್ತಮ ಲಾಭ ನೀಡುವ ಈ ಉದ್ಯಮ ಇದೀಗ ಗ್ರಾಮೀಣ ಭಾಗದ ಯುವಕರಲ್ಲೂ ಆಸಕ್ತಿ ಮೂಡಿಸಿದೆ.
ಮುತ್ತುಗಳು ಪ್ರಕೃತಿಯಲ್ಲಿ ದೊರೆಯುವ ಅಮೂಲ್ಯ ರತ್ನಗಳಲ್ಲಿ ಒಂದಾಗಿವೆ. ಶೆಲ್ ಒಳಗೆ ಮರಳು ಕಣ ಅಥವಾ ಸಣ್ಣ ಕಣಗಳು ಸೇರಿದಾಗ ಅವುಗಳ ಸುತ್ತ ವಿಶೇಷ ಪದರ ನಿರ್ಮಾಣವಾಗಿ ಮುತ್ತು ರೂಪುಗೊಳ್ಳುತ್ತದೆ. ಇದೇ ಪ್ರಕ್ರಿಯೆಯನ್ನು ಕೃತಕವಾಗಿ ರೂಪಿಸಿ ಈಗ ರೈತರು ವಾಣಿಜ್ಯ ಮಟ್ಟದಲ್ಲಿ ಮುತ್ತು ಕೃಷಿ ಮಾಡುತ್ತಿದ್ದಾರೆ.
ಈ ಕೃಷಿಗೆ ಉತ್ತೇಜನ ನೀಡಲು ಹಲವು ಹಣಕಾಸು ಸಂಸ್ಥೆಗಳು ಮತ್ತು ಕೃಷಿ ಸಂಘಟನೆಗಳು ಮುಂದಾಗಿವೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕೃಷಿ ಮೇಳದಲ್ಲಿ ಮುತ್ತು ಕೃಷಿ ಕುರಿತು ವಿಶೇಷ ಮಾಹಿತಿ ಕೇಂದ್ರವನ್ನು ತೆರೆಯಲಾಗಿತ್ತು. ಅಲ್ಲಿ ಮಂಡ್ಯ ಜಿಲ್ಲೆಯ ರೈತ ರಿಯಾಜ್ ಪಾಷಾ ಅವರು ರೈತರಿಗೆ ಮುತ್ತು ಬೆಳೆಯುವ ವಿಧಾನವನ್ನು ವಿವರಿಸಿ ಗಮನ ಸೆಳೆದರು.
ರಿಯಾಜ್ ಪಾಷಾ ಹಲವು ವರ್ಷ ದುಬೈನಲ್ಲಿ ಮೀನುಗಾರಿಕೆ ಮತ್ತು ಜಲಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ನಂತರ ಭಾರತಕ್ಕೆ ಮರಳಿದ ಅವರು ಒಡಿಶಾದ ತರಬೇತಿ ಕೇಂದ್ರದಲ್ಲಿ ಮುತ್ತು ಕೃಷಿಯ ಕುರಿತು ತರಬೇತಿ ಪಡೆದು 2021ರಿಂದ ತಮ್ಮ ಗ್ರಾಮದಲ್ಲಿ ಈ ಉದ್ಯಮ ಆರಂಭಿಸಿದರು. ಆರಂಭದಲ್ಲಿ ಸುಮಾರು ಐದು ಸಾವಿರ ಶೆಲ್‌ಗಳೊಂದಿಗೆ ಕೃಷಿ ಆರಂಭಿಸಿ ಈಗ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಮುತ್ತು ಕೃಷಿಯನ್ನು ಮನೆಯಲ್ಲಿಯೇ ಸಣ್ಣ ಟ್ಯಾಂಕ್‌ಗಳಲ್ಲಿ ಕೂಡ ಮಾಡಬಹುದು ಎಂದು ಅವರು ಹೇಳುತ್ತಾರೆ. ಸುಮಾರು 10×10 ಅಡಿ ಗಾತ್ರದ ಹಾಗೂ ಮೂರು ಅಡಿ ಆಳದ ಟ್ಯಾಂಕ್ ಸಾಕಾಗುತ್ತದೆ. ಮೊದಲು ಶೆಲ್‌ಗಳನ್ನು ಖರೀದಿಸಿ ಅವುಗಳಲ್ಲಿ ನ್ಯೂಕ್ಲಿಯಸ್ ಅಳವಡಿಸಬೇಕು. ಯಾವ ಆಕಾರದ ನ್ಯೂಕ್ಲಿಯಸ್ ಬಳಸುತ್ತೀರೋ ಅದೇ ರೂಪದಲ್ಲಿ ಮುತ್ತು ಬೆಳೆಯುತ್ತದೆ.
ನಂತರ ಈ ಶೆಲ್‌ಗಳನ್ನು ನೀರಿನಿಂದ ತುಂಬಿದ ಟ್ಯಾಂಕ್‌ನಲ್ಲಿ ಇಟ್ಟು ಅವುಗಳಿಗೆ ಅಗತ್ಯ ಆಹಾರವಾದ ಆಲ್ಗೀ ಮತ್ತು ಪ್ಲಾಂಕ್ಟನ್ ಒದಗಿಸಬೇಕು. ಸರಿಯಾದ ಆರೈಕೆ ಮಾಡಿದರೆ 18ರಿಂದ 24 ತಿಂಗಳೊಳಗೆ ಮುತ್ತು ಸಿದ್ಧವಾಗುತ್ತದೆ. ಮುತ್ತುಗಳ ಗುಣಮಟ್ಟದ ಆಧಾರದ ಮೇಲೆ ಒಂದಕ್ಕೆ 300ರಿಂದ 500 ರೂಪಾಯಿವರೆಗೆ ಬೆಲೆ ಸಿಗಬಹುದು.
ಟ್ಯಾಂಕ್‌ನಲ್ಲಿ ಮುತ್ತು ಕೃಷಿ ಮಾಡುವವರು ವಾರಕ್ಕೊಮ್ಮೆ ನೀರನ್ನು ಬದಲಾಯಿಸಬೇಕು. ಕೆರೆಗಳಲ್ಲಿ ಬೆಳೆಸಿದರೆ ನೀರಿನ ಕೊರತೆ ಆಗದಂತೆ ನೋಡಿಕೊಂಡರೆ ಸಾಕು. ಐದು ಸಾವಿರ ಶೆಲ್‌ಗಳೊಂದಿಗೆ ಮುತ್ತು ಕೃಷಿ ಆರಂಭಿಸಲು ಸುಮಾರು 1.5 ಲಕ್ಷ ರೂಪಾಯಿ ವೆಚ್ಚವಾಗಬಹುದು. ಆದರೆ ಎರಡು ವರ್ಷಗಳ ನಂತರ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಅವಕಾಶ ಇದೆ ಎಂದು ರೈತರು ಹೇಳುತ್ತಾರೆ.
ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಬಯಸುವ ರೈತರಿಗೆ ಮುತ್ತು ಕೃಷಿ ಉತ್ತಮ ಪರ್ಯಾಯ ಉದ್ಯಮವಾಗಿ ಬೆಳೆಯುತ್ತಿದೆ. ಸರಿಯಾದ ತರಬೇತಿ ಮತ್ತು ತಾಳ್ಮೆ ಇದ್ದರೆ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಅವಕಾಶ ಹೆಚ್ಚಿದೆ.



