ಮಧ್ಯತರಗತಿ ಕುಟುಂಬಗಳಿಗೆ ಪ್ರತಿ ತಿಂಗಳು ಆದಾಯ ನೀಡುವ ಪೋಸ್ಟ್ ಆಫೀಸ್ ಯೋಜನೆ
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದರೆ ಐದು ವರ್ಷಗಳ ಕಾಲ ಪ್ರತೀ ತಿಂಗಳು ನಿಶ್ಚಿತ ಆದಾಯ ಲಭ್ಯ, ಭದ್ರ ಹೂಡಿಕೆ ಬಯಸುವವರಿಗೆ ಇದು ಉತ್ತಮ ಆಯ್ಕೆ.
- ಪೋಸ್ಟ್ ಆಫೀಸ್ ಯೋಜನೆಯಲ್ಲಿ ತಿಂಗಳ ಆದಾಯ
- ಒಂದು ಬಾರಿ ಹೂಡಿಕೆ ಮಾಡಿ 5 ವರ್ಷಗಳ ಲಾಭ
- ಮಧ್ಯತರಗತಿ ಕುಟುಂಬಗಳಿಗೆ ಭದ್ರ ಹೂಡಿಕೆ ಯೋಜನೆ
Monthly Income Scheme: ಭದ್ರತೆ ಮತ್ತು ನಂಬಿಕೆಯನ್ನು ಮೊದಲಿಗೆ ನೋಡುವ ಸಾಮಾನ್ಯ ಜನರಿಗೆ ಹೂಡಿಕೆ ಎಂದರೆ ಇನ್ನೂ ಕೂಡ ಪೋಸ್ಟ್ ಆಫೀಸ್ ಯೋಜನೆಗಳೇ ಮೊದಲ ಆಯ್ಕೆ. ಅಂಥದೇ ವಿಶ್ವಾಸಾರ್ಹ ಯೋಜನೆಗಳಲ್ಲಿ ಒಂದಾಗಿರುವ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (MIS) ಈಗಲೂ ಹೂಡಿಕೆದಾರರ ಗಮನ ಸೆಳೆಯುತ್ತಿದೆ.
ಒಂದು ಬಾರಿ ಹೂಡಿಕೆ, ಪ್ರತಿ ತಿಂಗಳು ಆದಾಯ
MIS ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಇದರಲ್ಲಿ ಪದೇಪದೇ ಹಣ ಜಮಾ ಮಾಡುವ ಅಗತ್ಯವಿಲ್ಲ. ಒಂದೇ ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರೆ ಸಾಕು. ಸರ್ಕಾರ ನಿಗದಿಪಡಿಸಿರುವ ಪ್ರಸ್ತುತ 7.4% ವಾರ್ಷಿಕ ಬಡ್ಡಿ ಪ್ರಕಾರ, ಆ ಬಡ್ಡಿ ಮೊತ್ತವನ್ನು ಪ್ರತೀ ತಿಂಗಳು ನೇರವಾಗಿ ನಿಮ್ಮ ಸೇವಿಂಗ್ಸ್ ಖಾತೆಗೆ ಜಮಾ ಮಾಡಲಾಗುತ್ತದೆ.
ಹೂಡಿಕೆ ಮಿತಿ ಎಷ್ಟು?
ಈ ಯೋಜನೆಗೆ ಸೇರುವುದು ಸರಳ. ಕನಿಷ್ಠ ₹1,000 ದಿಂದ ಖಾತೆ ಆರಂಭಿಸಬಹುದು. ಒಬ್ಬ ವ್ಯಕ್ತಿ ಗರಿಷ್ಠವಾಗಿ ₹9 ಲಕ್ಷವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ, ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಅವಕಾಶವಿದೆ. ಜಂಟಿ ಖಾತೆಯನ್ನು ಗರಿಷ್ಠ ಮೂವರು ಸೇರಿ ತೆರೆಯಬಹುದು.
ತಿಂಗಳಿಗೆ ಆದಾಯ ಎಷ್ಟು ಸಿಗುತ್ತದೆ?
ಒಬ್ಬ ವ್ಯಕ್ತಿ ಗರಿಷ್ಠ ಮಿತಿ ಅಂದರೆ ₹9 ಲಕ್ಷ ಹೂಡಿಕೆ ಮಾಡಿದರೆ, ಪ್ರಸ್ತುತ ಬಡ್ಡಿದರದ ಪ್ರಕಾರ ತಿಂಗಳಿಗೆ ಸುಮಾರು ₹5,550 ಆದಾಯ ಲಭಿಸುತ್ತದೆ. ಐದು ವರ್ಷಗಳ ಕಾಲ ಯಾವುದೇ ವ್ಯತ್ಯಯವಿಲ್ಲದೆ ಈ ಆದಾಯ ನಿರಂತರವಾಗಿ ಬರುತ್ತಿರುತ್ತದೆ. ಮನೆ ಖರ್ಚು, ಔಷಧಿ, ದೈನಂದಿನ ಅಗತ್ಯಗಳಿಗೆ ಇದು ಉತ್ತಮ ಆರ್ಥಿಕ ಬೆಂಬಲವಾಗುತ್ತದೆ.
ಅಸಲು ಹಣಕ್ಕೆ ಪೂರ್ಣ ಭದ್ರತೆ
ಈ ಯೋಜನೆಯ ದೊಡ್ಡ ಬಲವೇ ಅಸಲು ಹಣಕ್ಕೆ ಸಂಪೂರ್ಣ ಭದ್ರತೆ. MIS ಯೋಜನೆಗೆ ಐದು ವರ್ಷಗಳ ಮೆಚ್ಯುರಿಟಿ ಅವಧಿ ಇದೆ. ಐದು ವರ್ಷಗಳ ಕಾಲ ತಿಂಗಳಿಗೆ ಬಡ್ಡಿ ಪಡೆದುಕೊಂಡ ನಂತರ, ನೀವು ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವನ್ನು ಮತ್ತೆ ಪಡೆಯಬಹುದು. ಅಂದರೆ ಲಾಭವೂ ಇದೆ, ಅಪಾಯವೂ ಇಲ್ಲ.
ಖಾತೆ ತೆರೆಯುವ ವಿಧಾನ
MIS ಖಾತೆ ತೆರೆಯಲು, ನಿಮ್ಮ ಬಳಿ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆ (Post Office Account) ಇರಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಖಾತೆ ತೆರೆಯಬಹುದು. ಖಾತೆ ತೆರೆದ ಮುಂದಿನ ತಿಂಗಳಿನಿಂದಲೇ ಆದಾಯ ಆರಂಭವಾಗುತ್ತದೆ. ನಿವೃತ್ತರು, ಗೃಹಿಣಿಯರು ಹಾಗೂ ನಿಶ್ಚಿತ ಆದಾಯ ಬಯಸುವವರಿಗೆ ಇದು ಬಹಳ ಉಪಯುಕ್ತ ಯೋಜನೆ.



