ಎಸ್ಬಿಐ ಗ್ರಾಹಕರಿಗೆ ದೊಡ್ಡ ಸೌಕರ್ಯ: ಕೆವೈಸಿ ಪ್ರಕ್ರಿಯೆಯಲ್ಲಿ ಬದಲಾವಣೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೆವೈಸಿ ಮತ್ತು ರೀ-ಕೆವೈಸಿ ಪ್ರಕ್ರಿಯೆಗಳನ್ನು ಸರಳಗೊಳಿಸಲು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ತೊಂದರೆ ಕಡಿಮೆ ಮಾಡಲು ಹೊಸ ವಿಧಾನ ರೂಪಿಸುತ್ತಿದೆ.

State Bank Of India: ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ದೊಡ್ಡ ಮಟ್ಟದ ಸೌಲಭ್ಯ ನೀಡಲು ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆವೈಸಿ ಹಾಗೂ ರೀ-ಕೆವೈಸಿ ಪ್ರಕ್ರಿಯೆಗಳ ಬಗ್ಗೆ ಗ್ರಾಹಕರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದು, ಬ್ಯಾಂಕ್ ಇದೀಗ ಅದನ್ನು ಸುಲಭಗೊಳಿಸಲು ಕ್ರಮ ಕೈಗೊಂಡಿದೆ.
ಈಗಾಗಲೇ ಗ್ರಾಹಕರು ಪ್ರತೀ ಎರಡು ವರ್ಷಕ್ಕೊಮ್ಮೆ ರೀ-ಕೆವೈಸಿ ಮಾಡಬೇಕಾಗುತ್ತದೆ. ಅಂಥವರು ಸಮಯಕ್ಕೆ ಕೆವೈಸಿ ಪೂರ್ಣಗೊಳಿಸದಿದ್ದರೆ ಅವರ ಖಾತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದು, ವ್ಯವಹಾರಗಳಿಗೂ ಅಡ್ಡಿಯಾಗುತ್ತಿದೆ ಎಂಬ ದೂರುಗಳು ಬ್ಯಾಂಕ್ಗೆ ಬಂದಿವೆ.
ಇದರಿಂದ ಗ್ರಾಹಕರ ಒತ್ತಡವನ್ನು ಕಡಿಮೆ ಮಾಡಲು ಚೇರ್ಮನ್ ಸಿ.ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ.
ಸಿ.ಎಸ್. ಶೆಟ್ಟಿ ಅವರು ಮುಂಬೈಯಲ್ಲಿ ನಡೆದ ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ ಮಾತನಾಡುತ್ತಾ, ಎಸ್ಬಿಐ ಈಗ 15 ಭಾಷೆಗಳಲ್ಲಿ ಡಿಜಿಟಲ್ ಮತ್ತು ಫಿಸಿಕಲ್ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ. ಮೊದಲು ಖಾತೆ ತೆರೆಯಲು ಒಂದು ಗಂಟೆ ಬೇಕಾಗುತ್ತಿದ್ದರೆ, ಈಗ ಕೇವಲ 10 ರಿಂದ 15 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಕೆವೈಸಿ ಸರಳೀಕರಣದ ಮಹತ್ವ:
ಬ್ಯಾಂಕ್ ಪ್ರಕಾರ, ಗ್ರಾಹಕರ ಮಾಹಿತಿಯನ್ನು ಸುರಕ್ಷಿತವಾಗಿಡುವುದು ಮತ್ತು ಸೈಬರ್ ಮೋಸಗಳನ್ನು ತಡೆಗಟ್ಟುವುದು ಕೆವೈಸಿಯ ಮುಖ್ಯ ಉದ್ದೇಶ. ಆದರೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಮರು ಪರಿಶೀಲನೆ ಅಗತ್ಯವಾಗುವುದರಿಂದ ಸರ್ಕಾರಿ ಬ್ಯಾಂಕ್ಗಳಲ್ಲಿ ಹೆಚ್ಚು ತೊಂದರೆ ಉಂಟಾಗುತ್ತಿದೆ ಎಂಬ ಅಸಮಾಧಾನ ಇದ್ದು, ಅದಕ್ಕೆ ಪರಿಹಾರ ಹುಡುಕಲು ಎಸ್ಬಿಐ ಕ್ರಮ ಕೈಗೊಂಡಿದೆ.
ಆರ್ಬಿಐ ಬೆಂಬಲ:
ರಿಸರ್ವ್ ಬ್ಯಾಂಕ್ ಅಧಿಕಾರಿಗಳೂ ಈ ಪರಿಷ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು “ಗ್ರಾಹಕರ ಸೌಕರ್ಯವೇ ನಮ್ಮ ಮೊದಲ ಆದ್ಯತೆ. ಒಂದು ಬಾರಿ ಕೆವೈಸಿ ಪೂರ್ಣಗೊಂಡರೆ, ಅದರ ಮಾಹಿತಿ ಮುಂದಿನ ಎಲ್ಲ ಬ್ಯಾಂಕಿಂಗ್ ಪ್ರಕ್ರಿಯೆಗಳಲ್ಲಿ ಸ್ವಯಂಚಾಲಿತವಾಗಿ ಅನ್ವಯವಾಗಬೇಕು” ಎಂದು ಹೇಳಿದ್ದಾರೆ.
ಗ್ರಾಹಕರ ಭಾರ ಕಡಿಮೆ ಮಾಡಲು ಪ್ರಯತ್ನ:
ಎಸ್ಬಿಐ ನಿಯಂತ್ರಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮುಂದಾಗಿದೆ. ಗ್ರಾಹಕರಿಗೆ ಕೆವೈಸಿ ನವೀಕರಣದ ತೊಂದರೆ ಕಡಿಮೆ ಮಾಡಿ, ಬ್ಯಾಂಕ್ ಸೇವೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಬದಲಾವಣೆಯಿಂದ ಲಕ್ಷಾಂತರ ಗ್ರಾಹಕರಿಗೆ ನಿಜವಾದ “ಬಿಗ್ ರಿಲೀಫ್” ಸಿಗಲಿದೆ.
SBI Simplifies KYC Process for Customers



