ಸೆಪ್ಟೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು.. ಎಲ್‌ಪಿಜಿ ಸಿಲಿಂಡರ್ ಜೊತೆಗೆ ಆಧಾರ್‌ನಲ್ಲಿ ಪ್ರಮುಖ ಬದಲಾವಣೆಗಳು!
September New Rules 2026: ಸೆಪ್ಟೆಂಬರ್ ಆರಂಭದೊಂದಿಗೆ ಎಲ್‌ಪಿಜಿ ಸಿಲಿಂಡರ್, ಆಧಾರ್ ಬಯೋಮೆಟ್ರಿಕ್, ದೊಡ್ಡ ಮೊತ್ತದ ಎಫ್‌ಡಿ ಸೇರಿದಂತೆ ಹಲವು ಹಣಕಾಸು ಮತ್ತು ಅಗತ್ಯ ಸೇವೆಗಳ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ.

- ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಬದಲಾವಣೆ
- ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್‌ಗೆ ಸೆ.30ರವರೆಗೆ ಅವಕಾಶ
- ಎಫ್‌ಡಿ ಬಡ್ಡಿದರ ಪ್ರಕಟಣೆಗೆ ಹೊಸ ನಿಯಮ
ಸೆಪ್ಟೆಂಬರ್‌ನಿಂದ ಬದಲಾಗಲಿದೆ ಈ ನಿಯಮಗಳು
September New Rules 2026: ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ದೇಶದ ಜನರ ದೈನಂದಿನ ಜೀವನಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಗ್ಯಾಸ್ ಬುಕಿಂಗ್‌ನಲ್ಲಿನ ಕೆವೈಸಿ (KYC), ಮಕ್ಕಳ ಆಧಾರ್ ಬಯೋಮೆಟ್ರಿಕ್ ಹಾಗೂ ದೊಡ್ಡ ಮೊತ್ತದ ಸ್ಥಿರ ಠೇವಣಿಗಳ (Fixed Deposit) ಕುರಿತ ನಿಯಮಗಳು ಗಮನ ಸೆಳೆಯುತ್ತಿವೆ.
ಪ್ರತಿ ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಿಶೀಲಿಸಿ ಪರಿಷ್ಕರಿಸುತ್ತವೆ. ಹೀಗಾಗಿ ಸೆಪ್ಟೆಂಬರ್ 1ರಂದು ವಾಣಿಜ್ಯ ಹಾಗೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಆಗುತ್ತದೆಯೇ ಎಂಬುದರ ಮೇಲೆ ಗ್ರಾಹಕರ ಗಮನವಿದೆ. ಬೆಲೆ ಏರಿಕೆ ಅಥವಾ ಇಳಿಕೆಯ ಬಗ್ಗೆ ತೈಲ ಕಂಪನಿಗಳ ಅಧಿಕೃತ ಘೋಷಣೆಯ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಇ-ಕೆವೈಸಿ (eKYC) ಪೂರ್ಣಗೊಳಿಸದ ಗ್ರಾಹಕರಿಗೆ ನೀಡಲಾಗಿದ್ದ ಗಡುವಿನಲ್ಲೂ ಮಹತ್ವದ ವಿಚಾರವಿದೆ. ಆಗಸ್ಟ್ 23, 2026ರೊಳಗೆ ಇ-ಕೆವೈಸಿ ಪೂರ್ಣಗೊಳಿಸದವರಿಗೆ ಆಗಸ್ಟ್ 31ರವರೆಗೆ ಅವಕಾಶ ವಿಸ್ತರಿಸಲಾಗಿದೆ. ಅಂದರೆ ಸೆಪ್ಟೆಂಬರ್‌ನಿಂದ ಈ ಪ್ರಕ್ರಿಯೆಗೆ ಅವಕಾಶ ಇರುವುದಿಲ್ಲ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಮಕ್ಕಳ ಆಧಾರ್‌ಗೆ ಉಚಿತ ಬಯೋಮೆಟ್ರಿಕ್ ಅಪ್‌ಡೇಟ್
ಮಕ್ಕಳ ಆಧಾರ್‌ಗೆ ಸಂಬಂಧಿಸಿದ ನಿಯಮದಲ್ಲೂ ಪೋಷಕರು ಗಮನಿಸಬೇಕಾದ ಬದಲಾವಣೆ ಇದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್‌ನಲ್ಲಿ ವಯಸ್ಕರಂತೆ ಬೆರಳಚ್ಚು ಮತ್ತು ಐರಿಸ್ ವಿವರಗಳು ಇರುವುದಿಲ್ಲ.
ಮಗು ಐದು ವರ್ಷ ದಾಟಿದ ಬಳಿಕ ಬಯೋಮೆಟ್ರಿಕ್ ವಿವರಗಳನ್ನು (Biometric Update) ಅಪ್‌ಡೇಟ್ ಮಾಡಿಸಬೇಕಾಗುತ್ತದೆ. 5ರಿಂದ 17 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಸರ್ಕಾರ ಸೆಪ್ಟೆಂಬರ್ 30, 2026ರವರೆಗೆ ಅವಕಾಶ ನೀಡಿದೆ. ಹೀಗಾಗಿ ಅರ್ಹ ಪೋಷಕರು ಗಡುವಿನೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ದೊಡ್ಡ ಮೊತ್ತದ ಎಫ್‌ಡಿಗೂ ಹೊಸ ನಿಯಮ
ಸ್ಥಿರ ಠೇವಣಿ ಕ್ಷೇತ್ರದಲ್ಲೂ ಹೊಸ ನಿಯಮ ಜಾರಿಗೆ ಬರಲಿದೆ. ಬ್ಯಾಂಕ್‌ಗಳಲ್ಲಿ ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳಿಗೆ ಅನ್ವಯಿಸುವ ಬಡ್ಡಿದರಗಳ ಮಾಹಿತಿಯನ್ನು ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಸಮಯಕ್ಕೆ ಸರಿಯಾಗಿ ಪ್ರಕಟಿಸಬೇಕಾಗುತ್ತದೆ.
ಹೊಸ ನಿಯಮದ ಪ್ರಕಾರ, ಇಂತಹ ಠೇವಣಿಗಳ ಬಡ್ಡಿದರಗಳನ್ನು ಪ್ರತಿಯೊಂದು ಕಾರ್ಯದಿನ ಬೆಳಗ್ಗೆ 10.10 ಗಂಟೆಯೊಳಗೆ ಬ್ಯಾಂಕ್‌ಗಳ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಇದರಿಂದ ದೊಡ್ಡ ಮೊತ್ತದ ಠೇವಣಿದಾರರಿಗೆ ಬಡ್ಡಿದರದ ಮಾಹಿತಿ ಹೆಚ್ಚು ಪಾರದರ್ಶಕವಾಗಿ ಲಭ್ಯವಾಗಲಿದೆ.
ಒಟ್ಟಿನಲ್ಲಿ ಸೆಪ್ಟೆಂಬರ್ ಆರಂಭಕ್ಕೂ ಮುನ್ನ ಗ್ಯಾಸ್ ಇ-ಕೆವೈಸಿ, ಮಕ್ಕಳ ಆಧಾರ್ ಅಪ್‌ಡೇಟ್ ಮತ್ತು ದೊಡ್ಡ ಮೊತ್ತದ ಎಫ್‌ಡಿ ನಿಯಮಗಳ ಬಗ್ಗೆ ಗ್ರಾಹಕರು ಗಮನಹರಿಸುವುದು ಮುಖ್ಯ. ವಿಶೇಷವಾಗಿ ಗಡುವು ಹೊಂದಿರುವ ಕೆಲಸಗಳನ್ನು ಕೊನೆಯ ಕ್ಷಣಕ್ಕೆ ಮುಂದೂಡದೆ ಮುಗಿಸಿಕೊಳ್ಳುವುದು ಒಳಿತು.



