ಭಾರಿ ಅನಾಹುತ: ಪ್ರವಾಹದ ರಭಸಕ್ಕೆ 3,000 ಎಲ್ಪಿಜಿ ಸಿಲಿಂಡರ್ಗಳು ನದಿಪಾಲು!
Raigad Floods: ಮಹಾರಾಷ್ಟ್ರದ ರಾಯಗಢದಲ್ಲಿ ಭಾರಿ ಮಳೆಯಿಂದ ಎಚ್ಪಿಸಿಎಲ್ ಎಲ್ಪಿಜಿ ಘಟಕಕ್ಕೆ ಪ್ರವಾಹ ನುಗ್ಗಿ 3,000 ಸಿಲಿಂಡರ್ಗಳು ನದಿಯಲ್ಲಿ ಕೊಚ್ಚಿಹೋಗಿವೆ. ಸಾರ್ವಜನಿಕರು ಸಿಲಿಂಡರ್ಗಳನ್ನು ಮುಟ್ಟದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Raigad Floods: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಪನ್ವೇಲ್ ತಾಲೂಕಿನ ಎಂಐಡಿಸಿ ಪ್ರದೇಶದಲ್ಲಿರುವ ಎಚ್ಪಿಸಿಎಲ್ (HPCL) ಪಾತಳಗಂಗಾ ಎಲ್ಪಿಜಿ ಬಾಟ್ಲಿಂಗ್ ಘಟಕ ಪ್ರವಾಹದ ನೀರಿನಿಂದ ಜಲಾವೃತಗೊಂಡಿದ್ದು, ಘಟಕದಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 3,000 ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ನಿರಂತರ ಮಳೆಯ ಪರಿಣಾಮ ಪ್ರವಾಹದ ನೀರಿನ ಒತ್ತಡ ಹೆಚ್ಚಾಗಿ ಘಟಕದ ರಕ್ಷಣಾ ಗೋಡೆ ಕುಸಿದಿದೆ. ಇದರಿಂದ ಸಂಗ್ರಹಣಾ ಪ್ರದೇಶದಲ್ಲಿದ್ದ ಸಿಲಿಂಡರ್ಗಳು ನೀರಿನ ರಭಸಕ್ಕೆ ಸಿಲುಕಿ ನದಿಗೆ ಹರಿದುಹೋಗಿವೆ. ಸೇತುವೆ ಮೇಲಿಂದ ನೂರಾರು ಸಿಲಿಂಡರ್ಗಳು ನೀರಿನಲ್ಲಿ ತೇಲುತ್ತಾ ಸಾಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಕೆಲವು ಸ್ಥಳೀಯರು ಪ್ರವಾಹದ ನೀರಿನಲ್ಲಿ ತೇಲಿಬಂದ ಸಿಲಿಂಡರ್ಗಳನ್ನು ಹೊರತೆಗೆದುಕೊಳ್ಳಲು ಮುಂದಾಗಿರುವ ದೃಶ್ಯಗಳೂ ವೈರಲ್ ಆಗಿವೆ. ಆದರೆ ಇದು ಅಪಾಯಕಾರಿಯಾಗಿರುವುದರಿಂದ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವಳೆ ಮಾತನಾಡಿ, ನದಿ ತೀರದಲ್ಲಿ ಅಥವಾ ಕೆಳಭಾಗದ ಪ್ರದೇಶಗಳಲ್ಲಿ ಸಿಲಿಂಡರ್ಗಳು ಕಂಡುಬಂದರೆ ಅವುಗಳನ್ನು ಯಾರೂ ಮುಟ್ಟಬಾರದು, ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಮನವಿ ಮಾಡಿದ್ದಾರೆ. ಯಾವುದೇ ಸಿಲಿಂಡರ್ ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಲಿಂಡರ್ಗಳನ್ನು ಪತ್ತೆಹಚ್ಚುವ ಹಾಗೂ ಸುರಕ್ಷಿತವಾಗಿ ವಾಪಸ್ ಸಂಗ್ರಹಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಿಲಿಂಡರ್ಗಳಿಂದ ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.



