ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ! ದೊಣ್ಣೆ, ಕೋಲುಗಳಿಂದ ಹೊಡೆದು ಭೀಕರ ಕೊಲೆ

ದೆಹಲಿಯ ಮಯೂರ್ ವಿಹಾರ್‌ನ ಅಶೋಕ್ ನಗರದಲ್ಲಿ ಮುಂಜಾನೆ ನಡುರಸ್ತೆಯಲ್ಲೇ 40 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ದೇಶದ ರಾಜಧಾನಿ ದೆಹಲಿಯಲ್ಲಿ (New Delhi) ಮುಂಜಾನೆ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬರನ್ನು ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದ ಅಶೋಕ್ ನಗರದಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಕೃತ್ಯ ನಡೆದಿದೆ.

ಸ್ಥಳೀಯ ಶಾಸಕನ ಕಚೇರಿ ಎದುರಿನಲ್ಲೇ ಘಟನೆ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸುಮಾರು 40 ವರ್ಷದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪು ಏಕಾಏಕಿ ಹಲ್ಲೆ (Attack) ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಸಮೀಪದಲ್ಲಿದ್ದ ನಂದ್‌ಲಾಲ್ ಎಂಬ ಭದ್ರತಾ ಸಿಬ್ಬಂದಿ (Security Guard) ದಾಳಿಕೋರರನ್ನು ತಡೆಯಲು ಮುಂದಾಗಿದ್ದಾರೆ.

ಆದರೆ ಹಲ್ಲೆ ನಡೆಸುತ್ತಿದ್ದವರು ನಂದ್‌ಲಾಲ್ ಅವರಿಗೂ ಬೆದರಿಕೆ ಹಾಕಿದ್ದಾರೆ. ತಮಗೆ ಅಡ್ಡ ಬಂದರೆ ಅವರನ್ನೂ ಕೊಲೆ ಮಾಡುವುದಾಗಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿಯಬೇಕಾಯಿತು ಎನ್ನಲಾಗಿದೆ.

ಬಳಿಕ ದುಷ್ಕರ್ಮಿಗಳು ಗಾಯಗೊಂಡ ವ್ಯಕ್ತಿಯ ಮೇಲೆ ಹಲ್ಲೆ ಮುಂದುವರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು (Delhi Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

ಮೃತ ವ್ಯಕ್ತಿಯ ವಯಸ್ಸು ಸುಮಾರು 40 ವರ್ಷ ಎಂದು ತಿಳಿದುಬಂದಿದ್ದು, ಅವರ ಗುರುತು ಹಾಗೂ ಇತರ ವೈಯಕ್ತಿಕ ವಿವರಗಳು ಇನ್ನಷ್ಟೇ ಖಚಿತವಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ಆರಂಭಿಸಿದ್ದಾರೆ.

ಹತ್ಯೆ ಮಾಡಿದವರು ಯಾರು ಮತ್ತು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವೈಯಕ್ತಿಕ ದ್ವೇಷ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇನ್ನು ಸಂಪೂರ್ಣ ಘಟನೆ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿ ಬಂಧಿಸಲು ಶೋಧ ಕಾರ್ಯ ಮುಂದುವರಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories