ದೆಹಲಿಯಲ್ಲಿ ಗಾಳಿ ವಿಷಮಯ, ವಿಮಾನ–ರೈಲು ಸಂಚಾರಕ್ಕೆ ಭಾರೀ ಅಡ್ಡಿ
ಚಳಿ ಮತ್ತು ದಟ್ಟ ಮಂಜಿನ ಮಧ್ಯೆ ದೆಹಲಿಯಲ್ಲಿ ಗಾಳಿ ಅಪಾಯಕಾರಿ ಮಟ್ಟ ತಲುಪಿದ್ದು, ದೃಶ್ಯತೆ ಕುಸಿತದಿಂದ ವಿಮಾನ ಹಾಗೂ ರೈಲು ಸಂಚಾರ ತೀವ್ರವಾಗಿ ಅಸ್ತವ್ಯಸ್ತವಾಗಿದೆ.
- ದೆಹಲಿಯಲ್ಲಿ AQI 400 ದಾಟಿ ಅಪಾಯಕಾರಿ ಹಂತ
- ಮಂಜಿನ ಪರಿಣಾಮ: ವಿಮಾನ ರದ್ದು, ರೈಲುಗಳು ತಡೆ
- ಗಾಳಿ ವಿಷಮಯ: ಮುಂದಿನ ದಿನಗಳೂ ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಉಸಿರುಗಟ್ಟುವ ವಾತಾವರಣ
Air Pollution: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ತೀವ್ರವಾಗುತ್ತಿರುವ ಜೊತೆಗೆ ಗಾಳಿ ಮಾಲಿನ್ಯವೂ ಆತಂಕಕಾರಿ ಮಟ್ಟ ತಲುಪಿದೆ. ಮಂಗಳವಾರ ಬೆಳಿಗ್ಗೆ 8:30ರ ವೇಳೆಗೆ ನಗರದ ಸರಾಸರಿ ಗಾಳಿ ಸೂಚ್ಯಂಕ (AQI) 415 ದಾಖಲಾಗಿದ್ದು, ಇದು ‘ಅಪಾಯಕಾರಿ’ ವರ್ಗಕ್ಕೆ ಸೇರಿದೆ. ಇದಕ್ಕೆ ದಟ್ಟ ಮಂಜು ಸೇರಿ ಜನಜೀವನಕ್ಕೆ ದೊಡ್ಡ ತೊಂದರೆಯಾಗಿದೆ.
ಯಾವ ಪ್ರದೇಶಗಳಲ್ಲಿ ಪರಿಸ್ಥಿತಿ ಹೆಚ್ಚು ಗಂಭೀರ?
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿ ಪ್ರಕಾರ, ದೆಹಲಿಯ ಸುಮಾರು 30ಕ್ಕೂ ಹೆಚ್ಚು ಏರ್ ಮಾನಿಟರಿಂಗ್ ಕೇಂದ್ರಗಳಲ್ಲಿ ಗಾಳಿ ನಾಣ್ಯತೆ ಅತ್ಯಂತ ಕೆಟ್ಟ ಮಟ್ಟದಲ್ಲಿದೆ.
ಆನಂದ್ ವಿಹಾರ್ ಪ್ರದೇಶದಲ್ಲಿ AQI 466 ತಲುಪಿದ್ದು ಅತಿಹೆಚ್ಚಾಗಿದೆ. ಜಹಂಗೀರ್ಪುರಿ, ಅಶೋಕ್ ವಿಹಾರ್, ದ್ವಾರಕಾ ಸೆಕ್ಟರ್–8, ಐಟಿಓ, ಚಾಂದಿನಿ ಚೌಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ 430 ರಿಂದ 450ರ ಮಧ್ಯೆ AQI ದಾಖಲಾಗಿದೆ. ತಜ್ಞರ ಅಂದಾಜು ಪ್ರಕಾರ, ಮುಂದಿನ ಆರು ದಿನಗಳವರೆಗೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ.
ಇದನ್ನೂ ಓದಿ: ದಟ್ಟವಾದ ಮಂಜು! ಉತ್ತರ ಪ್ರದೇಶದಲ್ಲಿ ರಸ್ತೆ ಕಾಣದೆ ಸರಣಿ ಅಪಘಾತ, ಇಬ್ಬರು ಸಾವು
ದಟ್ಟ ಮಂಜು–ವಿಮಾನ ಸಂಚಾರಕ್ಕೆ ದೊಡ್ಡ ಹೊಡೆತ
ಗಾಳಿ ಮಾಲಿನ್ಯದ ಜೊತೆಗೆ ದಟ್ಟ ಮಂಜು ನಗರವನ್ನು ಆವರಿಸಿದ್ದು, ದೃಶ್ಯತೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ (Flight Delay) ಭಾರೀ ಅಡ್ಡಿ ಉಂಟಾಗಿದೆ.
ಇಂದು ಬೆಳಿಗ್ಗೆ ಕನಿಷ್ಠ 10 ವಿಮಾನಗಳು ರದ್ದಾಗಿದ್ದು, ಕೆಲವು ವಿಮಾನಗಳನ್ನು ದಾರಿ ಮರುಮಾರ್ಗಗೊಳಿಸಲಾಗಿದೆ. ಇನ್ನು ಕೆಲ ವಿಮಾನಗಳು ತಡವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಫ್ಲೈಟ್ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸುವಂತೆ ಏರ್ಪೋರ್ಟ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ರೈಲು ಪ್ರಯಾಣಿಕರಿಗೂ ಸಂಕಷ್ಟ
ಮಂಜಿನ ಪರಿಣಾಮ ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿದೆ. ದೃಶ್ಯತೆ ಕಡಿಮೆಯಾದ ಕಾರಣ ಹಲವು ರೈಲುಗಳು ಗಂಟೆಗಟ್ಟಲೆ ತಡವಾಗಿ ಸಂಚರಿಸುತ್ತಿವೆ. ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಆರೋಗ್ಯದ ಕುರಿತ ಎಚ್ಚರಿಕೆ
ವೈದ್ಯರು ಮತ್ತು ತಜ್ಞರು ಮಕ್ಕಳಿಗೆ, ವೃದ್ಧರಿಗೆ ಹಾಗೂ ಉಸಿರಾಟದ ಸಮಸ್ಯೆ ಇರುವವರಿಗೆ ಹೊರಗಡೆ ಸಂಚಾರ ತಪ್ಪಿಸುವಂತೆ ಸೂಚಿಸಿದ್ದಾರೆ. ಅಗತ್ಯವಿದ್ದರೆ ಮಾಸ್ಕ್ ಬಳಕೆ, ಕಿಟಕಿಗಳನ್ನು ಮುಚ್ಚಿಡುವುದು ಹಾಗೂ ಒಳಾಂಗಣದಲ್ಲಿ ಉಳಿಯುವುದು ಒಳಿತು ಎಂದು ಸಲಹೆ ನೀಡಿದ್ದಾರೆ.







