ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭ! ಏಪ್ರಿಲ್ 15ರಿಂದ ನೋಂದಣಿ ಅವಕಾಶ

ಅಮರನಾಥ ಯಾತ್ರೆ ಈ ವರ್ಷ ಜುಲೈ 3ರಿಂದ ಆರಂಭವಾಗಿ ಆಗಸ್ಟ್ 28ರವರೆಗೆ ನಡೆಯಲಿದೆ. ಏಪ್ರಿಲ್ 15ರಿಂದ ಯಾತ್ರಿಕರು ನೋಂದಣಿ ಮಾಡಿಕೊಳ್ಳಬಹುದು ಎಂದು ಜಮ್ಮು ಕಾಶ್ಮೀರ ಆಡಳಿತ ಅಧಿಕೃತವಾಗಿ ಪ್ರಕಟಿಸಿದೆ.

ಜುಲೈನಲ್ಲಿ ಆರಂಭವಾಗಲಿದೆ ಪವಿತ್ರ ಅಮರನಾಥ ಯಾತ್ರೆ

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ (Amarnath Yatra) ಈ ವರ್ಷ ಜುಲೈ 3ರಿಂದ ಆರಂಭವಾಗಲಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ನೀಡಿರುವ ಮಾಹಿತಿಯ ಪ್ರಕಾರ, ಈ ಯಾತ್ರೆ ಆಗಸ್ಟ್ 28ರವರೆಗೆ ಮುಂದುವರಿಯಲಿದೆ. ಒಟ್ಟು 57 ದಿನಗಳ ಕಾಲ ಈ ಮಹತ್ವದ ಧಾರ್ಮಿಕ ಯಾತ್ರೆ ನಡೆಯಲಿದೆ.

ಯಾತ್ರೆಗೆ ತೆರಳುವ ಮೊದಲ ಬ್ಯಾಚ್ ಯಾತ್ರಿಕರು ಜುಲೈ 1ರಿಂದಲೇ ತಮ್ಮ ಪ್ರಯಾಣವನ್ನು ಆರಂಭಿಸಲಿದ್ದಾರೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ರಾಜಭವನದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ನೋಂದಣಿ ಪ್ರಕ್ರಿಯೆ ಏಪ್ರಿಲ್ 15ರಿಂದ

ಅಮರನಾಥ ಯಾತ್ರೆಯಲ್ಲಿ ಭಾಗವಹಿಸಲು ಬಯಸುವ ಭಕ್ತರು ಏಪ್ರಿಲ್ 15ರಿಂದ ತಮ್ಮ ಹೆಸರು ನೋಂದಾಯಿಸಬಹುದು. ದೇಶದ ವಿವಿಧ ಭಾಗಗಳಲ್ಲಿ ಇರುವ 556 ಬ್ಯಾಂಕ್ ಶಾಖೆಗಳ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದರ ಜೊತೆಗೆ ಶ್ರೀ ಅಮರನಾಥಜೀ ಶ್ರೈನ್ ಬೋರ್ಡ್ ಅಧಿಕೃತ ವೆಬ್‌ಸೈಟ್ ಮೂಲಕವೂ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ನೋಂದಣಿ ವೇಳೆ ವೈದ್ಯಕೀಯ ಪ್ರಮಾಣಪತ್ರ ಸೇರಿದಂತೆ ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಯಾತ್ರಿಕರ ಭದ್ರತೆಗೆ ಹೊಸ ಕ್ರಮಗಳು

ಈ ಬಾರಿ ಯಾತ್ರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಹೊಸ ಕ್ರಮಗಳನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬ ಯಾತ್ರಿಕನಿಗೂ RFID ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ಯಾತ್ರಿಕರ ಚಲನವಲನವನ್ನು ನಿಗಾ ವಹಿಸಲು ಸಾಧ್ಯವಾಗುತ್ತದೆ.

ಇದಕ್ಕು ಜೊತೆಗೆ ಯಾತ್ರಿಕರ ಅಪಘಾತ ವಿಮಾ ಮೊತ್ತವನ್ನು ರೂ.10 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಕ್ತರ ಸುರಕ್ಷತೆ ಹಾಗೂ ಭರವಸೆಗಾಗಿ ಕೈಗೊಂಡ ಕ್ರಮವಾಗಿದೆ.

ಯಾತ್ರೆಯ ಪ್ರಮುಖ ಮಾರ್ಗಗಳು

ಪರಂಪರೆಯಂತೆ ಈ ಬಾರಿ ಕೂಡ ಅಮರನಾಥ ಯಾತ್ರೆ ಎರಡು ಪ್ರಮುಖ ಮಾರ್ಗಗಳಲ್ಲಿ ನಡೆಯಲಿದೆ. ಮೊದಲ ಮಾರ್ಗ ನುನ್ವಾನ್–ಪಹಲ್ಗಾಂ ಮಾರ್ಗವಾಗಿದ್ದು, ಮತ್ತೊಂದು ಬಲತಾಲ್–ಗಂದೇರ್ಬಲ್ ಮಾರ್ಗವಾಗಿದೆ.

13 ರಿಂದ 70 ವರ್ಷ ವಯಸ್ಸಿನವರನ್ನು ಮಾತ್ರ ಈ ಯಾತ್ರೆಗೆ ಅನುಮತಿಸಲಾಗುತ್ತದೆ. ಭಕ್ತರು ಆರೋಗ್ಯದ ದೃಷ್ಟಿಯಿಂದ ತಯಾರಾಗಿ ಯಾತ್ರೆಯಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Related Stories