ಪಕ್ಕದ ಮನೆಯ ಮಹಿಳೆಗೆ ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾರ! ಆಟೋ ಚಾಲಕ ಅರೆಸ್ಟ್
ಪಕ್ಕದ ಮನೆಯ ಮಹಿಳೆಗೆ ಮದ್ದು ಬೆರೆಸಿದ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ ಆಟೋ ಚಾಲಕ, ಘಟನೆ ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೇರಳದ ಪತನಂತಿಟ್ಟ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ನಡೆದ ದೌರ್ಜನ್ಯ ಪ್ರಕರಣ ಆತಂಕ ಹುಟ್ಟಿಸಿದೆ. ಪರಿಚಯದ ಹೆಸರಿನಲ್ಲಿ ನಂಬಿಕೆ ಗಳಿಸಿದ್ದ ಆಟೋ ಚಾಲಕ, ಪಕ್ಕದ ಮನೆಯ ಮಹಿಳೆಗೆ ಮದ್ದು ಬೆರೆಸಿದ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ವಿನೋದ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಪಕ್ಕದ ಮನೆಯಲ್ಲಿ ವಾಸವಾಗಿದ್ದ 28 ವರ್ಷದ ಮಹಿಳೆ ಆಗಾಗ ಅವನ ಆಟೋದಲ್ಲೇ ಸಂಚರಿಸುತ್ತಿದ್ದಳು. ಇದೇ ಪರಿಚಯವನ್ನು ದುರುಪಯೋಗ ಮಾಡಿಕೊಂಡಿದ್ದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಮಹಿಳೆಗೆ ಮದ್ದು ಬೆರೆಸಿದ ಪಾನೀಯ ನೀಡಿದ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ನಂತರ ಅದನ್ನೇ ಆಧಾರವಾಗಿಸಿಕೊಂಡು ಹಲವು ಬಾರಿ ಬೆದರಿಕೆ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಆರೋಪಿ ಬೆದರಿಸುತ್ತಿದ್ದ ಕಾರಣ ಮಹಿಳೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಕೊನೆಗೆ ಈ ವಿಷಯವನ್ನು ತನ್ನ ಪತಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಬಳಿಕ ಆರೋಪಿ ಕೋಪಗೊಂಡು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರು ಶೋಧ ಕಾರ್ಯ ನಡೆಸಿ ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ವಿಚಾರಣೆ ಮುಂದುವರಿದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



