ಶಟಲ್‌ಕಾಕ್ ವಿಚಾರಕ್ಕೆ ಜಗಳ, 9 ವರ್ಷದ ಸ್ನೇಹಿತನನ್ನು ಇರಿದು ಕೊಂದ 11 ವರ್ಷದ ಬಾಲಕ
ಉತ್ತರಾಖಂಡದಲ್ಲಿ ಬ್ಯಾಡ್ಮಿಂಟನ್ ಆಟದ ವೇಳೆ ಮಕ್ಕಳ ನಡುವೆ ಆರಂಭವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿದ್ದು, 11 ವರ್ಷದ ಬಾಲಕನ ಚಾಕು ಇರಿತಕ್ಕೆ 9 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಡೆಹ್ರಾಡೂನ್: ಆಟವಾಡುವ ವೇಳೆ ಮಕ್ಕಳ ನಡುವೆ ಆರಂಭವಾದ ಸಣ್ಣ ವಿಚಾರವೊಂದು ದುರಂತಕ್ಕೆ ಕಾರಣವಾಗಿರುವ ಘಟನೆ ಉತ್ತರಾಖಂಡದ (Uttarakhand) ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಡ್ಮಿಂಟನ್ ಆಟದ ಸಂದರ್ಭದಲ್ಲಿ ಉಂಟಾದ ಜಗಳದಲ್ಲಿ 11 ವರ್ಷದ ಬಾಲಕನೊಬ್ಬ ತನ್ನ 9 ವರ್ಷದ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದು, ಬಾಲಕ ಮೃತಪಟ್ಟಿದ್ದಾನೆ.
ಜಸ್ಪುರದ ಚಿಪಿಯನ್ ಪ್ರದೇಶದಲ್ಲಿ ಕೆಲ ಮಕ್ಕಳು ಶಟಲ್ ಬ್ಯಾಡ್ಮಿಂಟನ್ (Badminton) ಆಡುತ್ತಿದ್ದರು. ಆಟದ ಮಧ್ಯೆ ಶಟಲ್‌ಕಾಕ್ ಕಾಲುವೆಗೆ ಬಿದ್ದಿದ್ದು, ಅದನ್ನು ಹೊರತೆಗೆಯುವ ವಿಚಾರದಲ್ಲಿ ಮಕ್ಕಳ ನಡುವೆ ವಾಗ್ವಾದ ಆರಂಭವಾಗಿದೆ.
ವಿವಾದ ತೀವ್ರಗೊಂಡ ಬಳಿಕ ಇಬ್ಬರು ಬಾಲಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸ್ಕೂಟರ್ ಮೇಲೆ ಕುಳಿತಿದ್ದ 9 ವರ್ಷದ ಬಾಲಕ 11 ವರ್ಷದ ಬಾಲಕನಿಗೆ ಶಟಲ್‌ಕಾಕ್‌ನಿಂದ ಹೊಡೆದಿದ್ದಾನೆ. ಇದಕ್ಕೆ ಪ್ರತಿಯಾಗಿ ಮತ್ತೊಬ್ಬ ಬಾಲಕನೂ ದಾಳಿ ಮಾಡಿದ್ದಾನೆ.
ನಂತರ 9 ವರ್ಷದ ಬಾಲಕ ಬ್ಯಾಡ್ಮಿಂಟನ್ ರಾಕೆಟ್‌ನಿಂದ (Badminton Racket) ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ 11 ವರ್ಷದ ಬಾಲಕ ತನ್ನ ಬಳಿಯಿದ್ದ ಚಾಕುವನ್ನು ತೆಗೆದು 9 ವರ್ಷದ ಬಾಲಕನ ಎದೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಬಾಲಕ ಸಹಾಯಕ್ಕಾಗಿ ರಸ್ತೆ ಬದಿಯಲ್ಲಿದ್ದ ಮೆಡಿಕಲ್ ಶಾಪ್ (Medical Shop) ಕಡೆಗೆ ಹೇಗೋ ತೆರಳಿದ್ದಾನೆ. ಆದರೆ ಅಲ್ಲಿಯೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆ (Postmortem)ಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 11 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಕ್ಕಳು ಹಾಗೂ ಇತರರಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಜಗಳ ಹೇಗೆ ಆರಂಭವಾಯಿತು ಮತ್ತು ಚಾಕು ಎಲ್ಲಿಂದ ಬಂತು ಎಂಬುದೂ ಸೇರಿದಂತೆ ಘಟನೆಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಟದ ವಿಚಾರಕ್ಕೆ ಆರಂಭವಾದ ಮಕ್ಕಳ ನಡುವಿನ ಸಾಮಾನ್ಯ ಜಗಳ ಇಷ್ಟು ಭೀಕರವಾಗಿ ತಿರುಗಿ, ಒಂದು ಬಾಲಕನ ಜೀವವನ್ನೇ ಬಲಿ ಪಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



