ಬೆಂಗಳೂರು ಕಾಲೇಜಿನಲ್ಲಿ ಓದಿದ ಬಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿ?
ನೇಪಾಳದ ಚುನಾವಣೆಯಲ್ಲಿ ಹೊಸ ರಾಜಕೀಯ ಅಲೆ ಸೃಷ್ಟಿಸಿದ ಬಲೇಂದ್ರ ಶಾ ಅವರ ಪಕ್ಷ ಭಾರಿ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ ಓದಿದ ಯುವ ನಾಯಕ ನೇಪಾಳದ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕಾಠ್ಮಂಡು: ನೇಪಾಳದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ಕಂಡುಬಂದಿದೆ. ಮಾಜಿ ಕಾಠ್ಮಂಡು ಮೇಯರ್ ಬಲೇಂದ್ರ ಶಾ ಅವರ ನೇತೃತ್ವದ ಹೊಸ ಪಕ್ಷ ಭಾರೀ ಮುನ್ನಡೆ ಸಾಧಿಸುತ್ತಿದ್ದು, ದೇಶದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಬಗ್ಗೆ ಚರ್ಚೆಗಳು ಜೋರಾಗಿವೆ.
ಒಟ್ಟು 165 ನೇರ ಚುನಾವಣಾ ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳ ಫಲಿತಾಂಶಗಳು ಹೊರಬಂದಿದ್ದು, ಬಲೇಂದ್ರ ಶಾ ಅವರ ಪಕ್ಷ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದು, ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಹಿರಿಯ ನಾಯಕರಿಗೆ ಸವಾಲು
ಝಾಪಾ-5 ಕ್ಷೇತ್ರದಲ್ಲಿ ಬಲೇಂದ್ರ ಶಾ ಅವರು ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಓಲಿ ವಿರುದ್ಧ ಭಾರೀ ಮುನ್ನಡೆ ಸಾಧಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮತ ಎಣಿಕೆ ಪ್ರಕಾರ ಬಲೇಂದ್ರ ಶಾ ಸಾವಿರಾರು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಕಳೆದ 18 ವರ್ಷಗಳಲ್ಲಿ ಸುಮಾರು 14 ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಇದರಿಂದ ಬೇಸತ್ತಿದ್ದ ಯುವ ಮತದಾರರು ಈ ಬಾರಿ ಹೊಸ ನಾಯಕತ್ವದತ್ತ ಮುಖ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಜೊತೆ ವಿಶೇಷ ನಂಟು
ಬಲೇಂದ್ರ ಶಾ ಅವರಿಗೆ ಕರ್ನಾಟಕದೊಂದಿಗೆ ಕೂಡ ಒಂದು ವಿಶೇಷ ಸಂಬಂಧವಿದೆ. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. 2016ರಿಂದ 2018ರ ಅವಧಿಯಲ್ಲಿ ಅಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು.
ಬೆಂಗಳೂರಿನಲ್ಲಿ ಓದಿದ ಯುವ ನಾಯಕ ಈಗ ನೇಪಾಳ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿರುವುದು ವಿಶೇಷವಾಗಿದೆ. ಚುನಾವಣಾ ಟ್ರೆಂಡ್ ಗಮನಿಸಿದರೆ ಬಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಬಹಳ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ನೇಪಾಳದ ರಾಜಕೀಯದಲ್ಲಿ ಯುವ ನಾಯಕತ್ವಕ್ಕೆ ದೊರಕುತ್ತಿರುವ ಈ ಬೆಂಬಲ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಯುಗಕ್ಕೆ ದಾರಿ ಮಾಡಿಕೊಡಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.






