ಬರಿಗೈಯಲ್ಲಿ ಚಿರತೆಯ ಜೊತೆ ಹೋರಾಡಿ ಬದುಕುಳಿದ 13 ವರ್ಷದ ಬಾಲಕನ ಸಾಹಸ ವೈರಲ್
ಮಧ್ಯಪ್ರದೇಶದ ಅರಣ್ಯ ಪ್ರದೇಶದ ಬಳಿ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ಎಲ್ಲರ ಗಮನ ಸೆಳೆದಿದೆ.

ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಪಿಪರಿಯಾ ಅರಣ್ಯ ಪ್ರದೇಶದ ಸಮೀಪ ನಡೆದ ಘಟನೆ ಒಂದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೇವಲ 13 ವರ್ಷದ ಬಾಲಕನೊಬ್ಬ ಚಿರತೆಯ ದಾಳಿಯಿಂದ ಧೈರ್ಯದಿಂದ ಪಾರಾಗಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಸತ್ಯಂ ಠಾಕೂರ್ ಎಂಬ 8ನೇ ತರಗತಿ ವಿದ್ಯಾರ್ಥಿ ತನ್ನ ಮನೆಯ ಹತ್ತಿರದ ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೊದೆಯೊಳಗೆ ಅಡಗಿ ಕುಳಿತಿದ್ದ ಚಿರತೆ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ. ಸುತ್ತಮುತ್ತ ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಬಾಲಕ ಹೆದರದೆ ಚಿರತೆಯ ಎದುರು ನಿಂತಿದ್ದಾನೆ.
ಆ ಸಮಯದಲ್ಲಿ ಯಾವುದೇ ಆಯುಧ ಇಲ್ಲದಿದ್ದರೂ, ಸತ್ಯಂ ತನ್ನ ಸಮಯಪ್ರಜ್ಞೆ ತೋರಿಸಿ ಚಿರತೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಬಾಲಕ ನಡೆಸಿದ ಹೋರಾಟ ಕೆಲ ಕ್ಷಣ ಭಯಾನಕವಾಗಿತ್ತು. ಚಿರತೆ ಉಗುರುಗಳಿಂದ ಹೊಟ್ಟೆ, ಕೈ ಮತ್ತು ಕಾಲುಗಳಿಗೆ ಗಾಯಗಳಾದರೂ ಆತ ಧೈರ್ಯ ಕಳೆದುಕೊಳ್ಳಲಿಲ್ಲ.
“ನಾನು ಬಾವಿಯ ಬಳಿ ಆಟವಾಡುತ್ತಿದ್ದೆ. ಆಗ ಚಿರತೆ ಹಠಾತ್ ಬಂದಿತು. ನಾನು ಅದರ ಕುತ್ತಿಗೆ ಹಿಡಿದುಕೊಂಡೆ. ಅದು ನನ್ನ ಮೇಲೆ ಪರಚಿತು. ನಾನು ಜೋರಾಗಿ ಕೂಗುತ್ತಿದ್ದಂತೆ ಮನೆಯವರು ಓಡಿ ಬಂದರು,” ಎಂದು ಸತ್ಯಂ ಘಟನೆಯ ನೆನಪು ಹಂಚಿಕೊಂಡಿದ್ದಾನೆ.
ಸಂಜೆ ವೇಳೆಯಲ್ಲಿ ಬಾಲಕನ ಕಿರುಚಾಟ ಕೇಳಿದ ಕುಟುಂಬದವರು ಹಾಗೂ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಜನರು ಕಡ್ಡಿಗಳು ಹಿಡಿದು ಗದ್ದಲ ಮಾಡುತ್ತಿದ್ದಂತೆ ಚಿರತೆ ಹೆದರಿ ಕಾಡಿನೊಳಗೆ ಓಡಿ ಹೋಗಿದೆ. ಬಾಲಕನ ಧೈರ್ಯವನ್ನು ಕಂಡು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಪ್ರಾಥಮಿಕ ಹಣಸಹಾಯ ಕೂಡ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಆ ಭಾಗದಲ್ಲಿ ಚಿರತೆಗಳ ಸಂಚಾರ ಸಾಮಾನ್ಯವಾದರೂ ಮಕ್ಕಳ ಮೇಲೆ ದಾಳಿ ನಡೆಸುವುದು ಅಪರೂಪ. ಈ ಘಟನೆ ನಂತರ ಗ್ರಾಮಸ್ಥರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



