ನವ ವರನಿಗೆ ಬಂದೂಕು ತೋರಿಸಿ, ವಧುವಿನ ಅಪಹರಣ ಮಾಡಿದ ಮಾಜಿ ಲವರ್

ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಧುವನ್ನು ಮಾಜಿ ಪ್ರಿಯತಮ ಗನ್ ತೋರಿಸಿ ಅಪಹರಿಸಿದ ಘಟನೆ ನಡೆದಿದೆ. ನವವರನ ಬೆದರಿಸಿ ವಧುವನ್ನು ಕೊಂಡೊಯ್ದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Bride Kidnapped: ಮದುವೆ ಮಂಟಪದ ಸಂತೋಷ ಇನ್ನೂ ಕಡಿಮೆಯಾಗುವ ಮುನ್ನವೇ, ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ (Odisha, Bolangir) ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮದುವೆ ಸಮಾರಂಭ ಮುಗಿಸಿ ಹೊಸ ಜೀವನದ ಕನಸುಗಳೊಂದಿಗೆ ಹೊರಟಿದ್ದ ಜೋಡಿಗೆ ಅಕಸ್ಮಿಕವಾಗಿ ದುಃಸ್ವಪ್ನ ಎದುರಾಯಿತು.

ಹರಿಬಂಧು ಪಟೇಲ್ ಎಂಬ ಯುವಕನ ವಿವಾಹ ಕಂಟಮಾಲ್ ಪ್ರದೇಶದಲ್ಲಿ ಶನಿವಾರ ರಾತ್ರಿ ನೆರವೇರಿತ್ತು. ಮದುವೆಯ ಬಳಿಕ, ನವವಧು ತನ್ನ ಕುಟುಂಬದವರೊಂದಿಗೆ ವರನ ವಾಹನದಲ್ಲಿ ಊರಿಗೆ ಹೊರಟಿದ್ದರು. ಆದರೆ ಭಾನುವಾರ ಮುಂಜಾನೆ ತರ್ಬಾ ರಸ್ತೆಯ ಬಡಬಂಧ ಸಮೀಪ ಅವರ ವಾಹನವನ್ನು ಮೂವರು ಅಡ್ಡಗಟ್ಟಿದರು.

ಅವರಲ್ಲಿ ಒಬ್ಬನು ವಧುವಿನ ಮಾಜಿ ಪ್ರಿಯನಾಗಿದ್ದು, ನವವರನಿಗೆ ಗನ್ ತೋರಿಸಿ ಬೆದರಿಕೆ ಹಾಕಿದನು ಎಂದು ದೂರಿನಲ್ಲಿ ಹೇಳಲಾಗಿದೆ. ಆತಂಕಗೊಂಡ ಕುಟುಂಬದವರ ಎದುರಲ್ಲೇ ನವವಧುವನ್ನು ಬಲವಂತವಾಗಿ ಕೊಂಡೊಯ್ದು ಪರಾರಿಯಾದರು. ಈ ಘಟನೆ ಹೊಸ ವರನನ್ನು ಮತ್ತು ಕುಟುಂಬವನ್ನು ಆಘಾತಕ್ಕೊಳಪಡಿಸಿದೆ.

ಘಟನೆಯ ಬಳಿಕ ಹರಿಬಂಧು ಪಟೇಲ್ ತರ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗನ್ ತೋರಿಸಿ ತನ್ನ ಪತ್ನಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ವಧುವನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ.

Related Stories