Bridge Collapses: ವಾಹನಗಳು ಸಂಚರಿಸುವಾಗಲೇ ಕುಸಿದು ಬಿದ್ದ ಸೇತುವೆ; ಒಂದು ಲಾರಿಗೆ ಹೊತ್ತಿಕೊಂಡ ಬೆಂಕಿ
Bridge Collapses: ಪಂಜಾಬ್‌ನಲ್ಲಿ ಎರಡು ಲಾರಿಗಳು ಸಂಚರಿಸುತ್ತಿದ್ದಾಗ ಕಬ್ಬಿಣದ ಸೇತುವೆ ಏಕಾಏಕಿ ಕುಸಿದಿದೆ. ಘಟನೆಯಿಂದ ಒಂದು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಬ್ಬರು ಚಾಲಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Bridge Collapses: ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗಲೇ ಸೇತುವೆ ಕುಸಿದುಬಿದ್ದರೆ ಪರಿಸ್ಥಿತಿ ಹೇಗಿರಬಹುದು? ಇಂತಹ ಆತಂಕಕಾರಿ ಘಟನೆ ಪಂಜಾಬ್‌ನ (Punjab) ಪಟಿಯಾಲಾ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಭಾಕ್ರಾ ಮುಖ್ಯ ಕಾಲುವೆ ಮೇಲಿದ್ದ ಕಬ್ಬಿಣದ ಸೇತುವೆ ಎರಡು ಲಾರಿಗಳು ಸಂಚರಿಸುತ್ತಿದ್ದ ಸಮಯದಲ್ಲೇ ಕುಸಿದುಬಿದ್ದಿದೆ.
ಗುರುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಪಟಿಯಾಲಾ-ಸಂಗ್ರೂರ್ ಬೈಪಾಸ್‌ನ ಪಾಸಿಯಾನಾ ಗ್ರಾಮದ ಸಮೀಪ ಈ ಅವಘಡ ಸಂಭವಿಸಿದೆ. ಸೇತುವೆ ಏಕಾಏಕಿ ಕುಸಿದ ಪರಿಣಾಮ ಅದರ ಮೇಲಿದ್ದ ಎರಡೂ ಲಾರಿಗಳು ಸೇತುವೆಯ ಅವಶೇಷಗಳ ನಡುವೆ ಸಿಲುಕಿಕೊಂಡಿವೆ. ಈ ವೇಳೆ ಒಂದು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಲಾರಿಯಲ್ಲಿನ ಜ್ವಾಲೆಗಳನ್ನು ನಿಯಂತ್ರಿಸುವುದರ ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನೂ ಕೈಗೊಂಡಿದ್ದಾರೆ.
ಈ ಅವಘಡದಲ್ಲಿ ಇಬ್ಬರು ಲಾರಿ ಚಾಲಕರು ಗಾಯಗೊಂಡಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಅಪಘಾತದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯ ರಸ್ತೆಗಳ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
2016ರಲ್ಲಿ ನಿರ್ಮಾಣವಾಗಿದ್ದ ಸೇತುವೆ!
ಈ ಸೇತುವೆಯ ನಿರ್ಮಾಣದ ಹಿನ್ನೆಲೆಯೂ ಈಗ ಚರ್ಚೆಗೆ ಬಂದಿದೆ. ಭಾಕ್ರಾ ಮುಖ್ಯ ಕಾಲುವೆಯ ಮೇಲೆ ಸುಮಾರು 60 ಮೀಟರ್ ಉದ್ದದ ಸ್ಟೀಲ್ ಟ್ರಸ್ ಸೇತುವೆಯನ್ನು 2016ರಲ್ಲಿ ನಿರ್ಮಿಸಲಾಗಿತ್ತು. ಪಂಜಾಬ್ ಸರ್ಕಾರದ ಲೋಕೋಪಯೋಗಿ ಇಲಾಖೆ (PWD) ಮೇಲ್ವಿಚಾರಣೆಯಲ್ಲಿ ಗಡಿ ರಸ್ತೆಗಳ ಸಂಸ್ಥೆ (BRO) ಈ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು.
ನಂತರ 2018ರಲ್ಲಿ ನಾಲ್ಕು ಪಥಗಳ ಪಟಿಯಾಲಾ ಬೈಪಾಸ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರಿಸಲಾಗಿತ್ತು. ಸದ್ಯ ಈ ರಸ್ತೆಯ ನಿರ್ವಹಣೆಯ ಜವಾಬ್ದಾರಿ ಎನ್‌ಎಚ್‌ಎಐ ವ್ಯಾಪ್ತಿಯಲ್ಲಿದೆ.
ಇದರ ನಡುವೆ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಮಾಡಿರುವ ಆರೋಪವೂ ಮಹತ್ವ ಪಡೆದುಕೊಂಡಿದೆ. ಸೇತುವೆಯ ಎಡಭಾಗದಲ್ಲಿರುವ ಈ ಕಬ್ಬಿಣದ ರಚನೆ ಕಳೆದ ಕೆಲವು ಸಮಯದಿಂದ ಅಲುಗಾಡುತ್ತಿತ್ತು ಎಂದು ನಿವಾಸಿಗಳು ಹೇಳಿಕೊಂಡಿದ್ದಾರೆ.
ಹಾಗಾದರೆ, ಸೇತುವೆ ಕುಸಿಯಲು ಇದೇ ಕಾರಣವೇ ಅಥವಾ ಬೇರೆ ತಾಂತ್ರಿಕ ದೋಷವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಅಧಿಕಾರಿಗಳು ಘಟನೆಗೆ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ.
#WATCH | Patiala, Punjab: An incident occurred near Pasiyana village on the Patiala-Sangrur bypass when a bridge over the Bhakra Canal suddenly collapsed. Two trucks fell into the gap, and one of the trucks caught fire.
Upon receiving information about the incident, fire department vehicles arrived at the site and managed to bring the blaze under control after a strenuous effort. The cause of the bridge collapse is not yet known. Official information regarding any casualties or injuries in the incident is awaited.
— ANI (@ANI) November 19, 2026



