ಕಿಡಿಗೇಡಿಗಳ ಕಿರುಕುಳ ತಪ್ಪಿಸಿಕೊಳ್ಳುವ ಬರದಲ್ಲಿ ಕಾರು ಪಲ್ಟಿ, ಯುವತಿ ಸಾವು
ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಕಾರು ವೇಗವಾಗಿ ಓಡಿಸಿದ ಯುವತಿಯರ ಪ್ರಯತ್ನವು ದುರಂತಕ್ಕೆ ಕಾರಣವಾಯಿತು. ಒಬ್ಬ ಯುವತಿ ಸ್ಥಳದಲ್ಲೇ ಸಾವಿಗೀಡಾದರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
- ಯುವತಿಯರ ಕಾರು ಪಲ್ಟಿ, ಓರ್ವ ಯುವತಿ ಸಾವು
- ಕಿಡಿಗೇಡಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಯತ್ನ
- ಆರೋಪಿಗಳ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆ
ಮಧ್ಯರಾತ್ರಿ 3 ಗಂಟೆ ಸಮಯ. ಪಶ್ಚಿಮ ಬಂಗಾಳದ ಪನಾಗಢದಲ್ಲಿ ನಡೆದ ಘಟನೆ ಇದಾಗಿದೆ. ಹೂಗ್ಲಿ ಜಿಲ್ಲೆಯ ಚಿನ್ಸುರಾ ನಿವಾಸಿ ಸುಚಂದ್ರ ಚಟ್ಟೋಪಾಧ್ಯಾಯ ಸಹೋದ್ಯೋಗಿಗಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಈ ಪ್ರಯಾಣ ಕ್ಷಣಾರ್ಧದಲ್ಲಿ ದುರಂತದಲ್ಲಿ ಅಂತ್ಯವಾಗಿದೆ.
ಸುಚಂದ್ರ ಮತ್ತು ಇಬ್ಬರು ಸ್ನೇಹಿತೆಯರು ಗಯಾಕ್ಕೆ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು. ಈ ವೇಳೆ ಐವರು ಕಿಡಿಗೇಡಿಗಳ ಗುಂಪೊಂದು ಅವರ ಕಾರನ್ನು ಹಿಂಬಾಲಿಸತೊಡಗಿತು. ಅಲ್ಲದೆ ಅಸಭ್ಯವಾಗಿ ವರ್ತಿಸಿದರು. ಇವರ ಕಿರುಕುಳ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯುವತಿ ಕಾರನ್ನು ವೇಗವಾಗಿ ಓಡಿಸಲು ಮುಂದಾಗಿದ್ದಾಳೆ.
ಇದೇ ವೇಳೆ ಕಿಡಿಗೇಡಿಗಳು ತಮ್ಮ ಕಾರಿನಿಂದ ಯುವತಿಯರ ಕಾರಿಗೆ ಗುದ್ದಿದ್ದಾರೆ. ಪರಿಣಾಮ ಯುವತಿಯರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಸುಚಂದ್ರ ತೀವ್ರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರೂ, ರಕ್ತಸ್ರಾವದಿಂದ ಬದುಕುಳಿಯಲಾಗಿಲ್ಲ.
ಇದನ್ನೂ ಓದಿ: ಮೂವರು ಬಾಲಕಿಯರ ಮೇಲೆ 18 ಬಾಲಕರಿಂದ ಸಾಮೂಹಿಕ ಅತ್ಯಾಚಾರ
ಅಪಘಾತದ ನಂತರ ಆರೋಪಿಗಳು ತಮ್ಮ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಮದ್ಯಪಾನ ಮಾಡಿದ್ದರೆಂಬುದು ಸ್ಪಷ್ಟವಾಗಿದೆ. ಅವರ ಕಾರಿನಲ್ಲಿ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. ಪ್ರಕರಣ ದಾಖಲಿಸಿ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ.
ಸುಚಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನಿಬ್ಬರು ಯುವತಿಯರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ತೀವ್ರ ಹುಡುಕಾಟ ನಡೆಸಿದ್ದಾರೆ
Car Crash in Bengal, Woman Dies Fleeing Harassers
Our Whatsapp Channel is Live Now 👇