Ration Card: ರೇಷನ್ ಕಾರ್ಡ್ ಫಲಾನುಭವಿಗಳೇ ಗಮನಿಸಿ! ಇದು ಸರ್ಕಾರದ ಹೊಸ ಯೋಜನೆ
Ration Card : ರೇಷನ್ ಕಾರ್ಡ್ ಹೊಂದಿರುವ ಕೋಟ್ಯಂತರ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ ಲಭ್ಯವಾಗಲಿದೆ. ಸಾರ್ಥಕ್ ಪಿಡಿಎಸ್ ಯೋಜನೆಯ ಮೂಲಕ ಧಾನ್ಯ ವಿತರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ಜಾರಿಯಾಗಲಿದೆ.

Ration Card : ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS)ಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಆಹಾರ ಧಾನ್ಯ ವಿತರಣೆಯಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ‘ಸಾರ್ಥಕ್ ಪಿಡಿಎಸ್’ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಯಡಿ ಗೋದಾಮಿನಿಂದ ನ್ಯಾಯಬೆಲೆ ಅಂಗಡಿವರೆಗೆ ಆಹಾರ ಧಾನ್ಯಗಳ ಸಾಗಣೆ ಮತ್ತು ವಿತರಣೆಯನ್ನು ರಿಯಲ್ಟೈಮ್ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾವ ಹಂತದಲ್ಲಿ ಎಷ್ಟು ಅಕ್ಕಿ, ಗೋಧಿ ಅಥವಾ ಇತರೆ ಧಾನ್ಯಗಳು ಸಾಗಿವೆ ಎಂಬ ಮಾಹಿತಿಯನ್ನು ಡಿಜಿಟಲ್ ಮೂಲಕ ಪರಿಶೀಲಿಸಲು ಅವಕಾಶ ಸಿಗಲಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸುಮಾರು 81.35 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಸಮರ್ಥವಾಗಿ ತಲುಪಿಸುವಲ್ಲಿ ಈ ಯೋಜನೆ ನೆರವಾಗಲಿದೆ ಎಂದು ಹೇಳಿದ್ದಾರೆ. ಯೋಜನೆಗಾಗಿ ಕೇಂದ್ರ ಸರ್ಕಾರ ₹25,530 ಕೋಟಿ ಅನುದಾನ ಘೋಷಿಸಿದೆ.
ಸಾರ್ಥಕ್ ಪಿಡಿಎಸ್ ಯೋಜನೆಯ ಪ್ರಮುಖ ಉದ್ದೇಶವೆಂದರೆ ತಂತ್ರಜ್ಞಾನ ಬಳಸಿ ರೇಷನ್ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು. ಇದಕ್ಕಾಗಿ ವಿಶೇಷ ಅಪ್ಲಿಕೇಶನ್ ಮತ್ತು ಡಿಜಿಟಲ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಮೂಲಕ ರೇಷನ್ ಕಾರ್ಡ್ ನಿರ್ವಹಣೆ, ಹೊಸ ಕಾರ್ಡ್ ಅರ್ಜಿ, ತಿದ್ದುಪಡಿ ಪ್ರಕ್ರಿಯೆ ಸೇರಿದಂತೆ ಹಲವು ಸೇವೆಗಳು ಸರಳಗೊಳ್ಳಲಿವೆ.
ಅರ್ಹ ಫಲಾನುಭವಿಗಳಿಗೆ ಮಾತ್ರ ರೇಷನ್ ತಲುಪುವಂತೆ ಆಧಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದರಿಂದ ನಕಲಿ ಫಲಾನುಭವಿಗಳ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಜೊತೆಗೆ ಗೋದಾಮಿನಿಂದ ಹೊರಟ ಧಾನ್ಯ ಎಷ್ಟು, ಅಂಗಡಿಗೆ ತಲುಪಿದ್ದು ಎಷ್ಟು ಮತ್ತು ಜನರಿಗೆ ವಿತರಣೆಗೊಂಡದ್ದು ಎಷ್ಟು ಎಂಬ ಮಾಹಿತಿ ಕೂಡ ಲಭ್ಯವಾಗಲಿದೆ.
ಈ ಯೋಜನೆ ಮುಂದಿನ ಐದು ವರ್ಷಗಳ ಕಾಲ ಜಾರಿಯಲ್ಲಿರಲಿದೆ. ರೇಷನ್ ಸಾಗಣೆ, ಧಾನ್ಯ ನಿರ್ವಹಣೆ ಹಾಗೂ ನ್ಯಾಯಬೆಲೆ ಅಂಗಡಿಗಳ ವಿತರಕರ ವೆಚ್ಚಗಳನ್ನು ಭರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ನೀಡುವುದು ಇದರ ಮತ್ತೊಂದು ಪ್ರಮುಖ ಉದ್ದೇಶವಾಗಿದೆ.



