14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಕೇಂದ್ರ! ರೈತರಿಗೆ ಬಂಪರ್ ಸುದ್ದಿ
2026-27ರ ಮಾರುಕಟ್ಟೆ ಹಂಗಾಮಿಗಾಗಿ ಕೇಂದ್ರ ಸರ್ಕಾರ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು, ಸೂರ್ಯಕಾಂತಿ, ಹತ್ತಿ ಮತ್ತು ತೊಗರಿ ಬೆಳೆಗಾರರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಮೂಡಿದೆ.

- ಸೂರ್ಯಕಾಂತಿ ಬೀಜಕ್ಕೆ ಅತಿಹೆಚ್ಚು ಬೆಂಬಲ ಬೆಲೆ ಹೆಚ್ಚಳ
- ಹತ್ತಿ, ಎಳ್ಳು ಹಾಗೂ ಹುಚ್ಚೆಳ್ಳು ಬೆಳೆಗಾರರಿಗೆ ಸಿಹಿ ಸುದ್ದಿ
- ರೈತರಿಗೆ ಲಕ್ಷಾಂತರ ಕೋಟಿ ರೂಪಾಯಿ ಪಾವತಿ ಸಾಧ್ಯತೆ
ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದು, 2026-27ರ ಖಾರಿಫ್ ಮಾರುಕಟ್ಟೆ ಹಂಗಾಮಿಗೆ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ಸೂರ್ಯಕಾಂತಿ ಬೆಳೆಗಾರರಿಗೆ ಹೆಚ್ಚು ಲಾಭವಾಗಲಿದೆ. ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಲ್‌ಗೆ 622 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಹತ್ತಿಗೆ 557 ರೂ., ಹುಚ್ಚೆಳ್ಳಿಗೆ 515 ರೂ. ಮತ್ತು ಎಳ್ಳಿಗೆ 500 ರೂ. ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಲಾಗಿದೆ.
ಇನ್ನೂ ಗ್ರೇಡ್ ಎ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2,461 ರೂ., ಹೈಬ್ರಿಡ್ ಜೋಳಕ್ಕೆ 4,023 ರೂ., ಸಜ್ಜೆಗೆ 2,900 ರೂ. ಹಾಗೂ ತೊಗರಿ ಬೇಳೆಗೆ 8,450 ರೂ. MSP ನಿಗದಿಪಡಿಸಲಾಗಿದೆ.
ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದಂತೆ, ಮುಂಗಾರು ಹಂಗಾಮಿನಲ್ಲಿ ಸುಮಾರು 824 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಬೆಳೆ ಖರೀದಿ ನಡೆಯುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಸುಮಾರು 2.6 ಲಕ್ಷ ಕೋಟಿ ರೂಪಾಯಿ ಪಾವತಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ರೈತ ಸಂಘಟನೆಗಳು ಕೇಂದ್ರದ ಈ ಕ್ರಮವನ್ನು ಸ್ವಾಗತಿಸಿದ್ದು, ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚದ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



