ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 51.50 ರೂಪಾಯಿ ಇಳಿಕೆ! ಗ್ರಾಹಕರಿಗೆ ಬಿಗ್ ರಿಲೀಫ್ - LPG Cylinder Price
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 51.50 ರೂ. ಇಳಿಕೆಯಾಗಿದೆ. ಈ ದರ ಇಳಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರೋದ್ಯಮಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗಿದೆ.

- ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ
- ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಹೊಸ ದರ
- ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
LPG Cylinder Price : ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಘೋಷಿಸಿವೆ. ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದ ಈ ಪರಿಷ್ಕರಣೆ ಪ್ರಕಾರ, 19 ಕೆಜಿ ವಾಣಿಜ್ಯ ಸಿಲಿಂಡರ್ ದರ 51.50 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಈಗ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,653 ರೂ. ಆಗಿದ್ದು, ಮೊದಲು ಹೋಲಿಸಿದರೆ 51.50 ರೂ. ಕಡಿಮೆಯಾಗಿದೆ. ಆದರೆ ಮನೆಗಳಲ್ಲಿ ಅಡುಗೆಗೆ ಬಳಸುವ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಸ್ತುತ ಇದರ ದರ 855.50 ರೂ. ಆಗಿಯೇ ಮುಂದುವರಿದಿದೆ.
ಇದೇ ಸಂದರ್ಭದಲ್ಲಿ 5 ಕೆಜಿ ಗೃಹ ಬಳಕೆಯ ಸಿಲಿಂಡರ್ ದರ 318.50 ರೂ. ಆಗಿದ್ದು, 47.5 ಕೆಜಿ ವಾಣಿಜ್ಯ ಸಿಲಿಂಡರ್ ದರ 4,129 ರೂ. ಆಗಿದೆ. ಇದರಲ್ಲಿ 127 ರೂ.ಗಳ ಇಳಿಕೆ ಮಾಡಲಾಗಿದೆ. ಹೀಗಾಗಿ, ಹೋಟೆಲ್‌ಗಳು, ತಿಂಡಿ ತಿನಿಸು ಕೇಂದ್ರಗಳು ಹಾಗೂ ಢಾಬಾಗಳಂತಹ ಸಣ್ಣಮಟ್ಟದ ಆಹಾರೋದ್ಯಮಗಳಿಗೆ ಇದು ಸ್ವಲ್ಪ ಮಟ್ಟಿನ ರಿಲೀಫ್ ನೀಡಲಿದೆ.
ಉದ್ಯಮಿಗಳ ಪ್ರಕಾರ, ಈ ಸಣ್ಣಮಟ್ಟದ ಇಳಿಕೆಯೂ ಸಹ ಹೆಚ್ಚಿನ ಬೇಡಿಕೆಯಿರುವ ನಗರ ಕೇಂದ್ರಗಳಲ್ಲಿ ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸಲು ಸಹಕಾರಿ.
ಆದರೆ ಅಂತರರಾಷ್ಟ್ರೀಯ ಇಂಧನ ಬೆಲೆ, ವಿದೇಶಿ ವಿನಿಮಯ ದರದ ಏರಿಳಿತಕ್ಕೆ ಅನುಗುಣವಾಗಿ ತೈಲ ಕಂಪನಿಗಳು ಪ್ರತಿ ತಿಂಗಳು ಇಂತಹ ಪರಿಷ್ಕರಣೆಗಳನ್ನು ಮಾಡುತ್ತವೆ.
Commercial LPG Cylinder Price Cut by 51.50







