ರೈತರೇ, ಪಿಎಂ ಕಿಸಾನ್ ಹಣ ಪಡೆಯಲು 3 ಪ್ರಮುಖ ಕೆಲಸ ಕಡ್ಡಾಯ! ಇಲ್ಲದಿದ್ರೆ ಹಣ ಸ್ಥಗಿತ!
ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ರೈತರು ಇ-ಕೆವೈಸಿ, ಆಧಾರ್-ಬ್ಯಾಂಕ್ ಲಿಂಕ್ ಹಾಗೂ ಭೂ ದಾಖಲೆಗಳನ್ನು ಸರಿಯಾಗಿ ಪೂರ್ಣಗೊಳಿಸಿರುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರದ ಮಾಹಿತಿ ತಿಳಿಸಿದೆ.

PM Kisan: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯುತ್ತಿರುವ ರೈತರು ಕೇವಲ ನೋಂದಣಿ ಮಾಡಿಕೊಂಡರೆ ಸಾಕಾಗುವುದಿಲ್ಲ. ಮುಂದಿನ ಕಂತುಗಳು ಯಾವುದೇ ಅಡೆತಡೆಯಿಲ್ಲದೆ ಖಾತೆಗೆ ಜಮೆಯಾಗಬೇಕಾದರೆ ಕೆಲವು ಪ್ರಮುಖ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರಬೇಕು. ಈ ಕೆಲಸಗಳಲ್ಲಿ ಲೋಪವಾದರೆ ಹಣ ಪಾವತಿ ವಿಳಂಬವಾಗುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ರೈತರಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಒಟ್ಟು ₹6,000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ತಲಾ ₹2,000ರಂತೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. PM Kisan (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ) ಯೋಜನೆಯಡಿ ದೇಶದ ಕೋಟ್ಯಂತರ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಮುಂದಿನ ಕಂತಿನ ಹಣಕ್ಕಾಗಿ ರೈತರು ಮೊದಲಿಗೆ ತಮ್ಮ ಇ-ಕೆವೈಸಿ (e-KYC) ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್‌ಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಗತ್ಯವಿದ್ದರೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳುವ ಅವಕಾಶವಿದೆ.
ಇದರ ಜೊತೆಗೆ ರೈತರ ಆಧಾರ್ ಮತ್ತು ಬ್ಯಾಂಕ್ ಖಾತೆ (Aadhaar-Bank Link) ಪರಸ್ಪರ ಜೋಡಣೆಯಾಗಿರುವುದು ಮುಖ್ಯ. ಪಿಎಂ ಕಿಸಾನ್ ಹಣ ನೇರವಾಗಿ ಖಾತೆಗೆ ಜಮೆಯಾಗುವ DBT (Direct Benefit Transfer) ವ್ಯವಸ್ಥೆಯಲ್ಲಿ ಈ ಸಂಪರ್ಕ ಸರಿಯಾಗಿರಬೇಕು. ಲಿಂಕ್ ಆಗದಿದ್ದರೆ ಕಂತಿನ ಹಣ ಖಾತೆಗೆ ಬರುವಲ್ಲಿ ತೊಂದರೆ ಎದುರಾಗಬಹುದು.
ಮೂರನೇಯದಾಗಿ, ರೈತರ ಭೂಮಿಗೆ ಸಂಬಂಧಿಸಿದ ದಾಖಲೆಗಳು ಪಿಎಂ ಕಿಸಾನ್ ದಾಖಲೆಯಲ್ಲಿ ಸರಿಯಾಗಿ ನಮೂದಾಗಿರಬೇಕು. ಭೂಮಿಯ ವಿವರಗಳಲ್ಲಿ ತಪ್ಪಿದ್ದರೆ, ದಾಖಲೆಗಳು ಅಪೂರ್ಣವಾಗಿದ್ದರೆ ಅಥವಾ ಅವುಗಳನ್ನು ಸರಿಯಾಗಿ ನವೀಕರಿಸದಿದ್ದರೆ ಹಣ ಪಾವತಿಗೆ ಅಡ್ಡಿಯಾಗಬಹುದು. ಹೀಗಾಗಿ ರೈತರು ತಮ್ಮ ಭೂ ದಾಖಲೆಗಳು (Land Records) ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಒಳಿತು.
ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿರುವ ಮಾಹಿತಿಯ ಪ್ರಕಾರ, ಭೂ ದಾಖಲೆಗಳಲ್ಲಿ ಸಮಸ್ಯೆ ಇರುವ 16,52,379 ಫಲಾನುಭವಿಗಳಿಗೆ ಪಾವತಿ ಸ್ಥಗಿತಗೊಂಡಿದೆ. ಆಧಾರ್-ಬ್ಯಾಂಕ್ ಖಾತೆ ಲಿಂಕ್ ಆಗದ 23,53,748 ಮಂದಿಗೂ ಹಾಗೂ ಇ-ಕೆವೈಸಿ ಪೂರ್ಣಗೊಳಿಸದ 32,94,609 ಫಲಾನುಭವಿಗಳಿಗೂ ಹಣ ಪಾವತಿಯಲ್ಲಿ ತಡೆ ಉಂಟಾಗಿದೆ ಎಂದು ತಿಳಿಸಲಾಗಿದೆ.
2026-27ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ 23ನೇ ಕಂತಿನ ಹಣ ಜೂನ್‌ನಲ್ಲಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ 24ನೇ ಕಂತಿನ ಕುರಿತು ರೈತರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ನಾಲ್ಕು ತಿಂಗಳ ಅಂತರದ ಆಧಾರದ ಮೇಲೆ ಅಕ್ಟೋಬರ್‌ನಲ್ಲಿ ಮುಂದಿನ ಕಂತು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಕಂತಿನ ಹಣದ ದಿನಾಂಕಕ್ಕಿಂತ ಮೊದಲು ರೈತರು ತಮ್ಮ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಮುಖ್ಯ. ಆಧಾರ್ ಲಿಂಕ್, ಇ-ಕೆವೈಸಿ ಹಾಗೂ ಭೂ ದಾಖಲೆಗಳು ಸರಿಯಾಗಿದ್ದರೆ ಪಾವತಿ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಸಹಾಯವಾಗಬಹುದು.



