ಸ್ನೇಹಿತನನ್ನೇ ಹತ್ಯೆ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್‌! ಸಿಕ್ಕಿಬಿದ್ದಿದ್ದೇ ರೋಚಕ ಕಹಾನಿ

ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ಹಣ ಕಳೆದುಕೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್‌, ಸಾಲದ ಒತ್ತಡ ತಾಳಲಾರದೆ ತನ್ನ ಆತ್ಮೀಯ ಸ್ನೇಹಿತನನ್ನೇ ಪತ್ನಿಯ ಜೊತೆ ಸೇರಿ ಹತ್ಯೆ ಮಾಡಿದ ಘಟನೆ ಸಂಚಲನ ಮೂಡಿಸಿದೆ.

ಸಮಾಜದ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸ್ ಸಿಬ್ಬಂದಿಯೊಬ್ಬನೇ ಕ್ರೂರ ಹಂತಕನಾಗಿ ಬದಲಾಗಿರುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದಿದ್ದ ಕಾನ್ಸ್‌ಟೇಬಲ್ ಪ್ರವೀಣ್‌, ಹಣಕಾಸಿನ ಸಂಕಷ್ಟದಿಂದ ಹೊರಬರಲು ತನ್ನ ಆಪ್ತ ಸ್ನೇಹಿತನನ್ನೇ ಮಾರ್ಗ ಮಧ್ಯೆ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರವೀಣ್ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಸುಮಾರು 36 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದ. ಈ ನಡುವೆ ವಿಶ್ವನಾಥ್ ಎಂಬ ಸ್ನೇಹಿತನಿಂದ ಸುಮಾರು 40 ಲಕ್ಷ ರೂಪಾಯಿವರೆಗೆ ಸಾಲ ಪಡೆದಿದ್ದ ಎನ್ನಲಾಗಿದೆ. ಸಾಲ ಮರುಪಾವತಿಗೆ ನಿರಂತರ ಒತ್ತಡ ಬರುತ್ತಿದ್ದಂತೆ, ಸ್ನೇಹಿತನನ್ನೇ ಅಡ್ಡಿಯಾಗಿಯೇ ನೋಡಲು ಆರಂಭಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪತ್ನಿಯ ಜೊತೆ ಸೇರಿ ರೂಪಿಸಿದ್ದ ಪ್ಲಾನ್

ಈ ಕೃತ್ಯದಲ್ಲಿ ಪ್ರವೀಣ್ ಪತ್ನಿ ರಜಿತ ಕೂಡ ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಮೇ 2ರಂದು ಹಣದ ವಿಚಾರವಾಗಿ ಮಾತನಾಡಬೇಕೆಂದು ನಂಬಿಸಿ ವಿಶ್ವನಾಥ್‌ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ದೊಡ್ಡಕೋಡೂರು ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರೂ ಸೇರಿ ಹತ್ಯೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲೆ ಮಾಡಿದ ಬಳಿಕ ಮೃತದೇಹ ಗುರುತಿಸದಂತೆ ಮಾಡಲು ರಂಗನಾಯಕ ಸಾಗರ್ ಜಲಾಶಯದ ಗೇಟ್ ಬಳಿ ಎಸೆದಿದ್ದಾರೆ. ಅಲ್ಲದೆ ಮೃತನ ಬಳಿ ಇದ್ದ ಚಿನ್ನಾಭರಣಗಳನ್ನೂ ಕಸಿದುಕೊಂಡು, ಬಳಿಕ ಯಾವುದೇ ಅನುಮಾನ ಬಾರದಂತೆ ಹೈದರಾಬಾದ್‌ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ದೂರಿನಿಂದ ಬಯಲಾಯ್ತು ಸತ್ಯ

ವಿಶ್ವನಾಥ್ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಕಳೆದ ತಿಂಗಳು ಮಹಿಳೆಯೊಬ್ಬರ ಕುತ್ತಿಗೆಯಿಂದ ಸುಮಾರು ಮೂರೂವರೆ ತೊಳೆಯ ಚಿನ್ನ ಕಳವು ಮಾಡಿದ ಪ್ರಕರಣದಲ್ಲೂ ಇದೇ ದಂಪತಿಯ ಕೈವಾಡವಿದೆ ಎಂಬುದು ಗೊತ್ತಾಗಿದೆ. ಇದರಿಂದ ಪ್ರವೀಣ್ ಮತ್ತು ರಜಿತ ವಿರುದ್ಧ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ಬೆಟ್ಟಿಂಗ್ ವ್ಯಸನದ ಭೀಕರ ಮುಖ

ಒಬ್ಬ ಸರ್ಕಾರಿ ನೌಕರ, ಅದರಲ್ಲೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ವ್ಯಸನವು ವ್ಯಕ್ತಿಯ ಯೋಚನಾ ಶಕ್ತಿಯನ್ನೇ ಹಾಳುಮಾಡಿ, ಆತ್ಮೀಯ ಸಂಬಂಧಗಳನ್ನೂ ನಾಶ ಮಾಡಬಲ್ಲದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಪ್ರಸ್ತುತ ಆರೋಪಿಗಳಾದ ಪ್ರವೀಣ್ ಮತ್ತು ರಜಿತ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories