ನಿಲ್ಲಿಸಿದ್ದ ಕಾರಿನಲ್ಲಿ ಪ್ರೇಮಿಗಳ ಶವ ಪತ್ತೆ; ಹಲವು ಆಯಾಮಗಳಲ್ಲಿ ತನಿಖೆ
ಮಧ್ಯಪ್ರದೇಶದ ಅಶೋಕ್ನಗರದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾಗಿದ್ದು, ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

ಭೋಪಾಲ್, ಜೂನ್ 26: ಮಧ್ಯಪ್ರದೇಶದ ಅಶೋಕ್ನಗರ ಜಿಲ್ಲೆಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಯುವಕ ಹಾಗೂ ಯುವತಿಯ ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಫೊರೆನ್ಸಿಕ್ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನ ಚಾಲಕನ ಸೀಟಿನಲ್ಲಿ ರಿತಿಕ್ ಸೋನಿ ಎಂಬ ಶಂಕಿತ ಯುವಕನ ಮೃತದೇಹ ಪತ್ತೆಯಾಗಿದೆ. ಆತನ ತಲೆಗೆ ಗುಂಡೇಟಿನ ಗಾಯವಿದ್ದು, ಮುಖದ ಮೇಲೂ ಸುಟ್ಟ ಗಾಯಗಳ ಗುರುತುಗಳು ಕಂಡುಬಂದಿವೆ. ಪಕ್ಕದ ಸೀಟಿನಲ್ಲಿ ಮಸ್ಕಾನ್ ಎಂಬ ಯುವತಿಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಕತ್ತಿನ ಭಾಗದಲ್ಲಿ ಗಂಭೀರ ಗಾಯಗಳಿರುವುದು ಗಮನಕ್ಕೆ ಬಂದಿದೆ. ಗಾಯಗಳ ನಿಖರ ಸ್ವರೂಪವನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಮಸ್ಕಾನ್ ಬುಧವಾರ ಜಿಮ್ಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದರೂ ಮರಳಿ ಮನೆಗೆ ಬಂದಿರಲಿಲ್ಲ. ಕುಟುಂಬದವರು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇನ್ನೊಂದೆಡೆ, ರಿತಿಕ್ ಕೆಲವು ದಿನಗಳ ಹಿಂದೆ ಇಂದೋರ್ನಿಂದ ಅಶೋಕ್ನಗರಕ್ಕೆ ಬಂದಿದ್ದ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದ ಪರಿಶೀಲನೆ ವೇಳೆ ಕಾರಿನೊಳಗಿನಿಂದ ಒಂದು ಪಿಸ್ತೂಲ್, ರಕ್ತದ ಕಲೆಗಳಿದ್ದ ಕೊಡಲಿ ಹಾಗೂ ಕಟರ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಾರಿನಿಂದ ಸುಮಾರು 50 ಮೀಟರ್ ದೂರದಲ್ಲಿ ಮೂರು ಮೊಬೈಲ್ ಫೋನ್ಗಳೂ ಪತ್ತೆಯಾಗಿವೆ. ಇವುಗಳ ಪರಿಶೀಲನೆಯೂ ತನಿಖೆಯ ಭಾಗವಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಫೊರೆನ್ಸಿಕ್ ಹಾಗೂ ಪೋಸ್ಟ್ಮಾರ್ಟಂ ವರದಿಗಳು ಬಂದ ನಂತರವೇ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಸಾಧ್ಯತೆಯನ್ನು ಕೈಬಿಡದೆ ಪರಿಶೀಲನೆ ಮುಂದುವರಿದಿದೆ.



