ಪಿಜಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 11 ಮಂದಿ ಸುರಕ್ಷಿತ; ರಕ್ಷಣಾ ಕಾರ್ಯ ಮುಂದುವರಿಕೆ
ದೆಹಲಿಯ ಸತ್ಯ ನಿಕೇತನದಲ್ಲಿ ಐದು ಅಂತಸ್ತಿನ ಪಿಜಿ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ (Satya Niketan) ಭಾನುವಾರ ಸಂಭವಿಸಿದ ಭೀಕರ ಪಿಜಿ ಕಟ್ಟಡ ಕುಸಿತದಲ್ಲಿ (Delhi PG Building Collapse) ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ರಾತ್ರಿಯಿಡೀ ನಡೆದ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳಡಿಯಿಂದ ಮತ್ತೊಬ್ಬ ವ್ಯಕ್ತಿಯನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಚಿಕಿತ್ಸೆಗೂ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ 11 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಕಟ್ಟಡದ ಅವಶೇಷಗಳಡಿ ಇನ್ನೂ 30ರಿಂದ 50 ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಶೋಧ ಕಾರ್ಯಾಚರಣೆ (Rescue Operation) ನಿರಂತರವಾಗಿ ನಡೆಯುತ್ತಿದೆ.
ಸುಮಾರು ಐದು ದಶಕಗಳಷ್ಟು ಹಳೆಯದಾದ ಕಟ್ಟಡದಲ್ಲಿ ನೆಲಮಹಡಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 1.30ರ ವೇಳೆಗೆ ಏಕಾಏಕಿ ಕಟ್ಟಡ ಕುಸಿದಿದೆ ಎನ್ನಲಾಗಿದೆ. ಸತತ ಮಳೆಯಿಂದ ಬೇಸ್‌ಮೆಂಟ್‌ನಲ್ಲಿ ನೀರು ನಿಂತು ಕಟ್ಟಡದ ತಳಪಾಯ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಬಳಿಕ ಎನ್‌ಡಿಆರ್‌ಎಫ್ (NDRF), ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದರು. ಭಾರೀ ಪ್ರಮಾಣದ ಅವಶೇಷಗಳನ್ನು ತೆರವುಗೊಳಿಸುತ್ತಾ, ಒಳಗೆ ಸಿಲುಕಿದ್ದವರಿಗಾಗಿ ಶೋಧ ನಡೆಸಲಾಗುತ್ತಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಇದರ ನಡುವೆ ಕಟ್ಟಡ ಕುಸಿಯುವ ಕೆಲವೇ ಕ್ಷಣಗಳ ಮುನ್ನ ನಡೆದ ಘಟನೆಯ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಟ್ಟಡದ ಎದುರಿನ ಅಂಗಡಿಯ ಹೊರಗೆ ಕುಳಿತಿದ್ದ ವ್ಯಕ್ತಿಯೊಬ್ಬರು, ಕಟ್ಟಡ ಕುಸಿಯುತ್ತಿರುವುದನ್ನು ಗಮನಿಸುತ್ತಿದ್ದಂತೆ ಕೂಡಲೇ ಎದ್ದು ಓಡಿ ಹೋಗಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವುದು ದೃಶ್ಯದಲ್ಲಿ ಕಾಣಿಸುತ್ತದೆ.
ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಕಟ್ಟಡದ ಮಾಲೀಕ ಹರಿರಾಮ್ (Hariram) ಸೇರಿದಂತೆ ಇತರರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Rekha Gupta) ಅವರು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಕಟ್ಟಡದ ದುರಸ್ತಿ ಕಾರ್ಯ, ತಳಪಾಯದ ಸ್ಥಿತಿ ಹಾಗೂ ಕುಸಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
CCTV footage captures the moment 5-storey student hostel building collapsed in Delhi’s Satya Niketan
Source: ANI pic.twitter.com/hbk84yRn5x
— WION (@WIONews) September 7, 2026



