ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಗರ್ಭಿಣಿಗೆ ಆಪರೇಷನ್! ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ
ಬಿಹಾರದ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರೇಟರ್ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 45 ನಿಮಿಷ ಕತ್ತಲಲ್ಲೇ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಇಬ್ಬರು ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಪಾಟ್ನಾ (Patna): ಬಿಹಾರದ ಜಮೂಯಿ (Jamui) ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ವೈದ್ಯರು ಮೊಬೈಲ್ ಟಾರ್ಚ್ (Mobile Torch) ಬೆಳಕಿನಲ್ಲೇ ಇಬ್ಬರು ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ನಡೆದಿದೆ. ಸೆಪ್ಟೆಂಬರ್ 11ರಂದು ನಡೆದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.
ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (Operation Theatre) ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ಬಳಸುವ ಜನರೇಟರ್ ಬ್ಯಾಕಪ್ ಕೂಡ ಕಾರ್ಯನಿರ್ವಹಿಸದ ಕಾರಣ ಸುಮಾರು 45 ನಿಮಿಷಗಳ ಕಾಲ ಥಿಯೇಟರ್‌ನಲ್ಲಿ ಕತ್ತಲೆ ಆವರಿಸಿತ್ತು ಎಂದು ವರದಿಯಾಗಿದೆ.
ಆ ಸಮಯದಲ್ಲಿ ಇಬ್ಬರು ಗರ್ಭಿಣಿಯರ ಶಸ್ತ್ರಚಿಕಿತ್ಸೆ ಈಗಾಗಲೇ ಆರಂಭವಾಗಿತ್ತು. ವಿದ್ಯುತ್ ಸಮಸ್ಯೆಯಿಂದ ಆಪರೇಷನ್ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೊಬೈಲ್ ಫೋನ್‌ಗಳ ಟಾರ್ಚ್ ಬೆಳಕಿನ ಸಹಾಯದಿಂದ ಶಸ್ತ್ರಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವ ವಿಚಾರವನ್ನು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ತಕ್ಷಣ ಸಮಸ್ಯೆ ಬಗೆಹರಿಯಲಿಲ್ಲ ಎಂದು ವೈದ್ಯರು ಹಾಗೂ ಸಿಬ್ಬಂದಿ ಆರೋಪಿಸಿದ್ದಾರೆ. ಈ ರೀತಿಯ ವಿದ್ಯುತ್ ವ್ಯತ್ಯಯದ ಘಟನೆಗಳು ಈ ಹಿಂದೆ ಕೂಡ ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಿಂದ ರೋಗಿಗಳ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ತುರ್ತು ವೈದ್ಯಕೀಯ ಸೇವೆ ನಡೆಯುವ ಆಪರೇಷನ್ ಥಿಯೇಟರ್‌ನಲ್ಲೇ ವಿದ್ಯುತ್ ಕಡಿತವಾಗಿರುವುದು ಆಸ್ಪತ್ರೆಯ ಮೂಲಸೌಕರ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ (High-Level Inquiry) ನಡೆಯುತ್ತಿದೆ ಎಂದು ಜಮೂಯಿ ಸದರ್ ಆಸ್ಪತ್ರೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ತನೇಶ್ ಕುಮಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಜನರೇಟರ್ ಬ್ಯಾಕಪ್ ವೈಫಲ್ಯ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಘಟನೆಯಲ್ಲಿ ಇಬ್ಬರು ಗರ್ಭಿಣಿಯರ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ವಿದ್ಯುತ್ ಪೂರೈಕೆಯಲ್ಲಿನ ಲೋಪದ ಕುರಿತು ಆಸ್ಪತ್ರೆ ಆಡಳಿತದಿಂದ ಪರಿಶೀಲನೆ ನಡೆಯುತ್ತಿದೆ.



