ನಕಲಿ ಬಿಪಿ ಮಾತ್ರೆ ಮಾರಾಟ ಜಾಲ ಪತ್ತೆ.. 3 ಮಂದಿ ಅರೆಸ್ಟ್!

ಗುಜರಾತ್‌ನಲ್ಲಿ ನಕಲಿ ರಕ್ತದೊತ್ತಡದ ಮಾತ್ರೆಗಳ ಜಾಲ ಪತ್ತೆಯಾಗಿದ್ದು, ವಿವಿಧ ನಗರಗಳ ಮೆಡಿಕಲ್‌ ಸ್ಟೋರ್‌ಗಳಿಗೆ ಔಷಧ ಪೂರೈಕೆ ಮಾಡಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

  • ನಕಲಿ ಬಿಪಿ ಮಾತ್ರೆ ಮಾರಾಟ ಜಾಲ ಪತ್ತೆ
  • 1,200 ಸ್ಟ್ರಿಪ್‌ಗಳು ಪೊಲೀಸರಿಂದ ವಶ
  • ಮೂವರು ಆರೋಪಿಗಳ ಬಂಧನ

ಗುಜರಾತ್‌ನಲ್ಲಿ ನಕಲಿ ಬಿಪಿ ಮಾತ್ರೆಗಳ ಜಾಲ

ಗುಜರಾತ್‌ನಲ್ಲಿ ನಕಲಿ ರಕ್ತದೊತ್ತಡದ ಮಾತ್ರೆಗಳ (Fake BP Pills) ಮಾರಾಟ ಜಾಲವನ್ನು ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಆಹಾರ ಮತ್ತು ಔಷಧ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, 1,200 ಸ್ಟ್ರಿಪ್‌ಗಳ ನಕಲಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಕಲಿ ಔಷಧಗಳ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ತನಿಖೆ ಮುಂದುವರಿದಂತೆ ಅಹಮದಾಬಾದ್ ಮಾತ್ರವಲ್ಲದೆ ಸೂರತ್, ಭಾವನಗರ, ನಡಿಯಾಡ್ ಮತ್ತು ಭುಜ್‌ನ ಹಲವು ಮೆಡಿಕಲ್‌ ಸ್ಟೋರ್‌ಗಳಿಗೆ ಈ ಮಾತ್ರೆಗಳನ್ನು ಪೂರೈಸಲಾಗುತ್ತಿತ್ತು ಎಂಬ ಮಾಹಿತಿ ಹೊರಬಂದಿದೆ.

ಅಧಿಕಾರಿಗಳ ಪ್ರಕಾರ, ಭರೂಚ್ ಮೂಲದ ಜೆಬಿ ಕೆಮಿಕಲ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸುವ ‘ನಿಕಾರ್ಡಿಯಾ ರಿಟಾರ್ಡ್ 10 ಟ್ಯಾಬ್ಲೆಟ್’ ಹೆಸರಿನಲ್ಲಿ ನಕಲಿ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ACG25007 ಎಂಬ ಬ್ಯಾಚ್‌ ಸಂಖ್ಯೆಯ (Batch Number) ಹೆಸರನ್ನು ಬಳಸಿ ನಕಲಿ ಔಷಧಗಳನ್ನು ಮಾರುಕಟ್ಟೆಗೆ ತಲುಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಅಹಮದಾಬಾದ್‌ನ ಸುಮಾರು 11 ಫಾರ್ಮಸಿಗಳಿಗೆ ‘ಪಾರ್ಶ್ವ ಮೆಡಿಕಲ್ ಸ್ಟೋರ್’ ಮೂಲಕ ನಕಲಿ ಮಾತ್ರೆಗಳು ಪೂರೈಕೆಯಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್‌ ಸ್ಟೋರ್ ಮಾಲೀಕ ದರ್ಶಿಲ್ ಸಂಘ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋ ಮೂಲದ ದೇವೇಂದ್ರ ಯಾದವ್ ಮತ್ತು ಉಮಂಗ್ ರಸ್ತೋಗಿಯನ್ನೂ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ದೇವೇಂದ್ರ ಯಾದವ್ ಮತ್ತು ಉಮಂಗ್ ರಸ್ತೋಗಿ ಗುಜರಾತ್‌ಗೆ ನಕಲಿ ಔಷಧಗಳನ್ನು ಪೂರೈಸುತ್ತಿದ್ದರು. ದರ್ಶಿಲ್ ಸಂಘ್ವಿ ಶೇ.18ರಷ್ಟು ಕಮಿಷನ್‌ಗೆ (Commission) ಆಮಿಷಕ್ಕೆ ಒಳಗಾಗಿ ಅವುಗಳನ್ನು ಮೆಡಿಕಲ್‌ ಸ್ಟೋರ್‌ಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ತನಿಖೆಯಲ್ಲಿ ನಕಲಿ ಮಾತ್ರೆಗಳು ಮೊದಲು ಉತ್ತರಾಖಂಡದಿಂದ ಲಕ್ನೋಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಒಟ್ಟು 3,600 ಸ್ಟ್ರಿಪ್‌ಗಳಲ್ಲಿ 2,700 ಸ್ಟ್ರಿಪ್‌ಗಳನ್ನು ಅಹಮದಾಬಾದ್‌ಗೆ ಹಾಗೂ 900 ಸ್ಟ್ರಿಪ್‌ಗಳನ್ನು ಮೈಸೂರಿಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್‌ಗೆ ತಲುಪಿದ್ದ 2,700 ಸ್ಟ್ರಿಪ್‌ಗಳಲ್ಲಿ 1,200 ಸ್ಟ್ರಿಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ 1,500 ಸ್ಟ್ರಿಪ್‌ಗಳು ಈಗಾಗಲೇ ಮಾರಾಟವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಮಾತ್ರೆಗಳ (Medicine Seizure) ಮಾದರಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅವುಗಳ ನಿಜವಾದ ಸ್ವರೂಪದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ನಾಲ್ಕು ವಿಶೇಷ ತನಿಖಾ ತಂಡಗಳನ್ನು ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿದೆ. ನಕಲಿ ಮಾತ್ರೆಗಳನ್ನು ತಯಾರಿಸಿದವರು ಯಾರು, ಅವುಗಳ ಪ್ಯಾಕೇಜಿಂಗ್ ಮತ್ತು ಸೀಲಿಂಗ್ ಎಲ್ಲಿ ನಡೆಯುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories