ಮದ್ಯದ ಚಟ ಬಿಡಿಸುವ ನಾಟಿ ಔಷಧಿ ಸೇವಿಸಿ ಇಬ್ಬರು ಸಾವು; ಐವರ ಸ್ಥಿತಿ ಗಂಭೀರ
ಮದ್ಯಪಾನದ ಅಭ್ಯಾಸದಿಂದ ಹೊರಬರಲು ನಾಟಿ ಔಷಧಿ ಸೇವಿಸಿದ ಏಳು ಮಂದಿಗೆ ಭಾರೀ ಆಘಾತ ಎದುರಾಗಿದೆ. ವಿಷಕಾರಿ ಮಿಶ್ರಣ ಸೇವನೆಯಿಂದ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮದ್ಯಪಾನದ ಚಟದಿಂದ ಮುಕ್ತರಾಗಬೇಕೆಂಬ ಉದ್ದೇಶದಿಂದ ಔಷಧಿ ಪಡೆಯಲು ಹೋದ ಇಬ್ಬರು ವ್ಯಕ್ತಿಗಳು ಕೊನೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಬೇತುಲ್ ಜಿಲ್ಲೆಯ ಪಟಾಖೇಡಾ ಗ್ರಾಮದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈ ಪ್ರಕರಣದಲ್ಲಿ ರಾಮ್ಕಿಶೋರ್ ಝಾಡೆ (35) ಮತ್ತು ಸಂಜಯ್ ಉಯಿಕೆ (22) ಮೃತಪಟ್ಟಿದ್ದಾರೆ. ಇದೇ ಮಿಶ್ರಣ ಸೇವಿಸಿದ ಮತ್ತ ಐವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದ್ಯದ ಚಟ ಬಿಡಿಸಲು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ ನೀಡಲಾಗುತ್ತದೆ ಎಂಬ ನಂಬಿಕೆಯಿಂದ ಏಳು ಮಂದಿ ಗ್ರಾಮಕ್ಕೆ ತೆರಳಿದ್ದರು. ಬುಧವಾರ (ನವೆಂಬರ್ 18) ಅವರಿಗೆ ಗಾಜಿನ ಲೋಟಗಳಲ್ಲಿ ಕೆಂಪು ಬಣ್ಣದ ದ್ರವವನ್ನು ಕುಡಿಯಲು ನೀಡಲಾಗಿದೆ. ಅದನ್ನು ಸೇವಿಸಿದ ಕೆಲವೇ ಸಮಯದಲ್ಲಿ ಎಲ್ಲರ ಆರೋಗ್ಯ ಹದಗೆಟ್ಟಿದೆ. ವಾಂತಿ ಸೇರಿದಂತೆ ಹಲವು ತೊಂದರೆಗಳು ಕಾಣಿಸಿಕೊಂಡಿವೆ.
ಎರಡು ಲೋಟ ಕುಡಿದಿದ್ದೇ ಸಾವಿಗೆ ಕಾರಣವೇ?
ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಒಬ್ಬರಾದ ಮೋಹನ್ ಅಮೃತೇ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದಿದ್ದ ಹೆಚ್ಚಿನವರು ಒಂದು ಲೋಟದಷ್ಟು ದ್ರವ ಸೇವಿಸಿದ್ದರು. ಆದರೆ ಮೃತಪಟ್ಟ ಇಬ್ಬರು ತಲಾ ಎರಡು ಲೋಟ ಕುಡಿದಿದ್ದರು ಎಂದು ಅವರು ತಿಳಿಸಿದ್ದಾರೆ. ದ್ರವ ಸೇವಿಸಿದ ನಂತರ ಎಲ್ಲರಿಗೂ ವಾಂತಿ ಆರಂಭವಾಗಿತ್ತು ಎಂದು ವಿವರಿಸಿದ್ದಾರೆ.
ಸಸ್ಯದ ಬೇರನ್ನು ನೀರಿನಲ್ಲಿ ನೆನೆಸಿ ಕೆಂಪು ಬಣ್ಣದ ಮಿಶ್ರಣ ತಯಾರಿಸಲಾಗಿತ್ತು ಎನ್ನಲಾಗಿದೆ. ಇದನ್ನೇ ಮದ್ಯವ್ಯಸನ ಬಿಡಿಸುವ ನಾಟಿ ಔಷಧಿ ಎಂದು ನಂಬಿಸಿ ನೀಡಲಾಗಿತ್ತು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಸಾವಿಗೆ ನಿಖರವಾಗಿ ಯಾವ ಅಂಶ ಕಾರಣವಾಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ಮೂವರು ಆರೋಪಿಗಳ ಬಂಧನ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಔಷಧಿ ತಯಾರಿಸಲು ಬಳಸಿದ್ದ ದ್ರವ ಹಾಗೂ ಸಸ್ಯದ ಬೇರಿನ ಪುಡಿಯನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (Forensic Test) ಕಳುಹಿಸಿದ್ದಾರೆ. ಅದರಲ್ಲಿರುವ ರಾಸಾಯನಿಕ ಅಂಶಗಳ ಪರಿಶೀಲನೆ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ನಿರೀಕ್ಷೆಯಿದೆ.
ಇನ್ನೊಂದೆಡೆ, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಲಾಗಿದೆ. ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ಕಾರ್ಯವೂ ಆರಂಭವಾಗಿದೆ.
ಡಿಐಜಿ ಬೀರೇಂದ್ರ ಕುಮಾರ್ ಸಿಂಗ್ ಮತ್ತು ಎಸ್ಪಿ ಅಮಿತ್ ಸಕ್ಸೇನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮದ್ಯದ ಚಟ ಬಿಡಿಸುವ ಹೆಸರಿನಲ್ಲಿ ನೀಡಲಾದ ಮಿಶ್ರಣವೇ ಇಬ್ಬರ ಸಾವಿಗೆ ಕಾರಣವಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗಮನಿಸಿ: ಮದ್ಯವ್ಯಸನದಿಂದ ಹೊರಬರಲು ಪರಿಶೀಲಿಸದ ನಾಟಿ ಔಷಧಿ ಅಥವಾ ಅಪರಿಚಿತ ಮಿಶ್ರಣಗಳನ್ನು ಸೇವಿಸುವುದು ಅಪಾಯಕಾರಿ. ವೈದ್ಯರ ಸಲಹೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.


