ಮಾಡಿದ್ದು 1 ಲಕ್ಷ ಸಾಲ, ಆದರೆ ಬಡ್ಡಿ 73 ಲಕ್ಷ: ತನ್ನ ಕಿಡ್ನಿ ಮಾರಿ ಸಾಲ ತೀರಿಸಿದ ರೈತ

ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ನಷ್ಟ ಎದುರಿಸಿದ ರೈತ, ಅತಿಯಾದ ಬಡ್ಡಿ ಒತ್ತಡದಿಂದ ಸಾಲ ತೀರಿಸಲು ಕ್ಯಾಂಬೋಡಿಯಾಗೆ ತೆರಳಿ ಕಿಡ್ನಿ ಮಾರಾಟ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

  • ಅತಿಯಾದ ಬಡ್ಡಿ ರೈತನ ಬದುಕನ್ನೇ ನಾಶಮಾಡಿತು
  • ಕಿಡ್ನಿ ಮಾರಾಟ ಮಾಡಬೇಕಾದ ದಾರುಣ ಪರಿಸ್ಥಿತಿ
  • ರೈತನ ಸಾಲ ₹1 ಲಕ್ಷ, ಆದ್ರೆ ಕಟ್ಟಿದ್ದು ₹73 ಲಕ್ಷ

ಮಹಾರಾಷ್ಟ್ರದ (Maharashtra Farmer) ಚಂದಾಪುರ ಜಿಲ್ಲೆಯ ರೈತ ರೋಶನ್ ಸದಾಶಿವ ಕೃಷಿಯಲ್ಲಿ ನಿರಂತರ ನಷ್ಟಗಳು ಎದುರಾದ ಬಳಿಕ, ಬದುಕು ಸುಧಾರಿಸಿಕೊಳ್ಳುವ ನಿರೀಕ್ಷೆಯಲ್ಲಿ ಹಾಲು ವ್ಯಾಪಾರ ಆರಂಭಿಸಲು ನಿರ್ಧಾರ ಮಾಡಿಕೊಂಡರು. ಅದಕ್ಕಾಗಿ ಇಬ್ಬರು ಖಾಸಗಿ ವ್ಯಕ್ತಿಗಳಿಂದ ₹1 ಲಕ್ಷ ಸಾಲ (Loan) ಪಡೆದು ಹಸುಗಳನ್ನು ಖರೀದಿಸಿದ್ದರು.

ವ್ಯಾಪಾರ ಕೈಕೊಟ್ಟಿತು, ಸಂಕಷ್ಟ ಹೆಚ್ಚಾಯಿತು

ವ್ಯಾಪಾರ ಚುರುಕಾಗುವ ಮೊದಲೇ ಹಸುಗಳು ಮೃತಪಟ್ಟವು. ಜೊತೆಗೆ ಬೆಳೆಗಳು ಕೈಕೊಟ್ಟವು. ಇದರಿಂದ ಸಾಲದ ಒತ್ತಡ ಮತ್ತಷ್ಟು ಹೆಚ್ಚಾಯಿತು. ಸಾಲ ನೀಡಿದವರು ದಿನಕ್ಕೆ ₹10 ಸಾವಿರ ಬಡ್ಡಿ ವಿಧಿಸುತ್ತಿದ್ದರಿಂದ, ಮೂಲ ಸಾಲವು ಕೆಲವೇ ಸಮಯದಲ್ಲಿ ₹73 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಏರಿತು.

ಆಸ್ತಿ ಮಾರಾಟಕ್ಕೂ ಸಾಲ ತೀರಲಿಲ್ಲ

ಸಾಲ ತೀರಿಸಲು (Loan Crisis) ರೈತ ತನ್ನ ಹೊಲ, ಟ್ರಾಕ್ಟರ್ ಹಾಗೂ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿದರು. ಆದರೂ ಸಾಲದ ಮೊತ್ತ ಕಡಿಮೆಯಾಗಲಿಲ್ಲ. ನಂತರ ಮತ್ತೊಬ್ಬ ವ್ಯಕ್ತಿಬಳಿ ಕರೆದುಕೊಂಡು ಹೋಗಿ, ಕೇವಲ 20 ದಿನಗಳಲ್ಲಿ ಶೇಕಡಾ 40ರಷ್ಟು ಬಡ್ಡಿ ವಿಧಿಸಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ರೈತ ಆರೋಪಿಸಿದ್ದಾರೆ.

ಅಂತಿಮವಾಗಿ ಕಿಡ್ನಿ ಮಾರಾಟದ ನಿರ್ಧಾರ

ಯಾವ ದಾರಿಯೂ ಕಾಣದ ಸ್ಥಿತಿಯಲ್ಲಿ, ಸಾಲ ತೀರಿಸಲು ಕಿಡ್ನಿ ಮಾರಾಟ ಮಾಡುವಂತೆ ಫೈನಾನ್ಸ್ ಕೊಟ್ಟ ವ್ಯಕ್ತಿಗಳು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಏಜೆಂಟ್ ಮೂಲಕ ಮೊದಲು ಕೊಲ್ಕತ್ತಾಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ರೈತ ಕ್ಯಾಂಬೋಡಿಯಾಕ್ಕೆ ಹೋಗಿ ಕಿಡ್ನಿ ಮಾರಾಟ ಮಾಡಿ ಕೇವಲ ₹8 ಲಕ್ಷ ಪಡೆದುಕೊಂಡಿದ್ದಾರೆ.

ನ್ಯಾಯಕ್ಕಾಗಿ ಹೋರಾಟ, ಎಚ್ಚರಿಕೆಯ ಸಂದೇಶ

ತನ್ನನ್ನು ಬಡ್ಡಿಯ ಹೆಸರಿನಲ್ಲಿ ಶೋಷಿಸಿದವರ ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಕ್ರಮವಾಗಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಇನ್ನು ನ್ಯಾಯ ದೊರಕದಿದ್ದರೆ, ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಅತಿಬಡ್ಡಿ ಹಾಗೂ ರೈತರ ಸಾಲ ಸಂಕಷ್ಟದ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories