ವಿದೇಶಿ ಮಹಿಳೆಗೆ ನಗ್ನ ಪೂಜೆ ಹೆಸರಲ್ಲಿ ವಂಚನೆ, ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್! ಜ್ಯೋತಿಷಿ ಅರೆಸ್ಟ್
ಚೆನ್ನೈನಲ್ಲಿ ವಿದೇಶಿ ಮಹಿಳೆಗೆ ನಗ್ನ ಪೂಜೆ ನಡೆಸುವಂತೆ ನಂಬಿಸಿ, ವಿಡಿಯೋ ಕಾಲ್ ಮೂಲಕ ದೃಶ್ಯಗಳನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಬೆದರಿಸಿದ ಆರೋಪದಲ್ಲಿ ವ್ಯಕ್ತಿಯ ಬಂಧನವಾಗಿದೆ.

ಚೆನ್ನೈನಲ್ಲಿ (Chennai) ವಿದೇಶಿ ಮಹಿಳೆಯೊಬ್ಬರಿಗೆ ಜ್ಯೋತಿಷ್ಯ ಹಾಗೂ ವಿಶೇಷ ಪೂಜೆಯ ಹೆಸರಿನಲ್ಲಿ ವಂಚನೆ (Foreign Woman Blackmailed) ಮಾಡಿರುವ ಆರೋಪ ಕೇಳಿಬಂದಿದೆ. ಮಹಿಳೆಯನ್ನು ವಿಡಿಯೋ ಕಾಲ್ (Video Call) ಮೂಲಕ ನಗ್ನ ಪೂಜೆಯಲ್ಲಿ ಭಾಗವಹಿಸುವಂತೆ ಮಾಡಿ, ಆ ದೃಶ್ಯಗಳನ್ನು ರೆಕಾರ್ಡ್ Video Record) ಮಾಡಿಕೊಂಡು ಬಳಿಕ ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾದ 37 ವರ್ಷದ ಮಹಿಳೆ ಇತ್ತೀಚೆಗೆ ತಮಿಳುನಾಡಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಚೆನ್ನೈನ ಬೆಸೆಂಟ್ ನಗರ ಬೀಚ್‌ನಲ್ಲಿ ಚಿಲಕ ಜ್ಯೋತಿಷ್ಯ ಹೇಳುತ್ತಿದ್ದ ಇಸಕ್ಕಿಮುತ್ತು ಎಂಬ ವ್ಯಕ್ತಿಯ ಪರಿಚಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಜಾತಕ ನೋಡಿದ ಆರೋಪಿ, ತಾನು ಆಕೆಯನ್ನು ಹಿಂದೆ ಟಿವಿಯಲ್ಲಿ ನೋಡಿರುವುದಾಗಿ ಹೇಳಿ ನಂಬಿಸಿದ್ದಾನೆ ಎನ್ನಲಾಗಿದೆ. ಜೀವನದಲ್ಲಿ ಇನ್ನಷ್ಟು ಯಶಸ್ಸು ಪಡೆಯಬೇಕಾದರೆ ವಿಶೇಷ ಪೂಜೆ ನಡೆಸಬೇಕು ಎಂದು ಹೇಳಿ, ಆ ಪೂಜೆಯನ್ನು ವಿಡಿಯೋ ಕಾಲ್ ಮೂಲಕವೂ ಮಾಡಬಹುದು ಎಂದು ಆಕೆಗೆ ತಿಳಿಸಿದ್ದಾನೆ.
ಆತನ ಮಾತುಗಳನ್ನು ನಂಬಿದ ಮಹಿಳೆ ಆರೋಪಿಯ ಸೂಚನೆಯಂತೆ ವಿಡಿಯೋ ಕಾಲ್‌ನಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಆರೋಪಿ ಆಕೆಯ ಖಾಸಗಿ ದೃಶ್ಯಗಳನ್ನು (Private Footage) ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪೂಜೆ ನಡೆಸಿದ್ದಕ್ಕಾಗಿ ಮಹಿಳೆಯಿಂದ ₹20,000 ಪಡೆದಿದ್ದ ಇಸಕ್ಕಿಮುತ್ತು, ಕೆಲವು ದಿನಗಳ ಬಳಿಕ ಮತ್ತೆ ಆಕೆಯನ್ನು ಸಂಪರ್ಕಿಸಿದ್ದಾನೆ. ತನ್ನ ಬಳಿ ವಿಡಿಯೋ ಇರುವುದಾಗಿ ತೋರಿಸಿ, ಮತ್ತಷ್ಟು ಹಣ ನೀಡಬೇಕು ಎಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಡುವುದಾಗಿ ಬೆದರಿಕೆ ಹಾಕಿದಾಗ ಮಹಿಳೆಗೆ ತಾನು ವಂಚನೆಗೊಳಗಾಗಿರುವುದು ಅರಿವಾಗಿದೆ. ಬಳಿಕ ಅವರು ಮಂಬಳಂ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಸಕ್ಕಿಮುತ್ತುವನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿ ಮಹಿಳೆಯಿಂದ ಪಡೆದ ಹಣ ಹಾಗೂ ವಿಡಿಯೋವನ್ನು ಬಳಸಿಕೊಂಡ ರೀತಿಯ ಬಗ್ಗೆಯೂ ತನಿಖೆ ಮುಂದುವರಿದಿದೆ.
ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಇಂತಹ ವಂಚನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಅಪರಿಚಿತರ ಮಾತು ನಂಬಿ ಯಾವುದೇ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.



