ಚಳಿ ಅಂತ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಮಲಗಿದ್ದ ಕುಟುಂಬ! ನಾಲ್ವರು ಸಾವು
ಚಳಿಯಿಂದ ರಕ್ಷಿಸಿಕೊಳ್ಳಲು ಮುಚ್ಚಿದ ಕೊಠಡಿಯಲ್ಲಿ ಬೆಂಕಿ ಹಚ್ಚಿ ಮಲಗಿದ್ದ ಕುಟುಂಬಕ್ಕೆ ವಿಷವಾಯು ಮಾರಕವಾಗಿ ಪರಿಣಮಿಸಿತು; ವೃದ್ಧೆ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿ, ಇನ್ನೂ ನಾಲ್ವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- ಚಳಿಗೆ ಬೆಂಕಿ ಹಚ್ಚಿಕೊಂಡು ಮಲಗಿದ್ದ ಕುಟುಂಬ
- ಮುಚ್ಚಿದ ಕೊಠಡಿಯಲ್ಲಿ ಹೊಗೆ ಸಂಗ್ರಹ
- ವೃದ್ಧೆ ಮತ್ತು ಮೂವರು ಮಕ್ಕಳು ಸಾವು
Brazier Death: ಚಳಿಗಾಲದ ತೀವ್ರತೆಯಿಂದ ರಕ್ಷಣೆ ಪಡೆಯಲು ಕೈಗೊಂಡ ಒಂದು ಸಣ್ಣ ನಿರ್ಧಾರ ಕುಟುಂಬಕ್ಕೆ ಮಾರಕ ದುರಂತವಾಗಿ ಪರಿಣಮಿಸಿದೆ. ಬಿಹಾರ ರಾಜ್ಯದ ಪಾಟ್ನಾ ಸಮೀಪದ ಚಾಪ್ರಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮುಚ್ಚಿದ ಕೋಣೆಯಲ್ಲಿ ಇಜ್ಜಲು ಬೆಳಗಿಸಿ ನಿದ್ರಿಸಿದ ಕುಟುಂಬದ ಸದಸ್ಯರು ವಿಷವಾಯುವಿಗೆ ಒಳಗಾಗಿ ಪ್ರಾಣಾಪಾಯಕ್ಕೆ ಸಿಲುಕಿದರು.
ಗುರುವಾರ ರಾತ್ರಿ ಚಳಿ ತಪ್ಪಿಸಲು ಕುಟುಂಬದ ಎಂಟು ಮಂದಿ ಒಂದೇ ಕೋಣೆಯಲ್ಲಿ ಬ್ರಇಜ್ಜಲಿಗೆ ಬೆಂಕಿ ಹಚ್ಚಿ ನಿದ್ರಿಸಿದರು. ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿದ್ದರಿಂದ ಕೊಠಡಿಯಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗಿ, ಕಾರ್ಬನ್ ಮಾನಾಕ್ಸೈಡ್ ಗ್ಯಾಸ್ ಜಮಾ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮವಾಗಿ ನಿದ್ರಿಸುತ್ತಿದ್ದ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಕೆಳ ಮಹಡಿಯಲ್ಲಿ ವಾಸವಾಗಿದ್ದ ಬಂಧುಗಳು ಮೇಲಕ್ಕೆ ಹೋಗಿ ನೋಡಿದಾಗ ಗಂಭೀರ ಪರಿಸ್ಥಿತಿ ಗಮನಕ್ಕೆ ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೃದ್ಧೆ ಕಮಲಾವತಿ ದೇವಿ (70) ಹಾಗೂ ಮೂವರು ಮಕ್ಕಳು, ಮೂರು ವರ್ಷದ ತೇಜಾಂಶ್ ಕುಮಾರ್, ಏಳು ತಿಂಗಳ ಗುಡಿಯಾ ಕುಮಾರಿ ಮತ್ತು ಆದಿಯಾ ಕುಮಾರಿ ಆಗಲೇ ಮೃತಪಟ್ಟಿರುವುದಾಗಿ (4 dead due to brazier) ವೈದ್ಯರು ದೃಢಪಡಿಸಿದರು.
ಇನ್ನೂ ನಾಲ್ವರು, ಆರ್ಯ ಕುಮಾರಿ (25), ಆರ್ಯ ಸಿಂಗ್ (24), ಅನಿಷಾ (25) ಮತ್ತು ಅಮಿತ್ ಅಲಿಯಾಸ್ ಸೋನು (35)—ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ನಂತರ ದುರಂತ ಸಂಭವಿಸಿದ ಕೋಣೆಯನ್ನು ಪರಿಶೀಲಿಸಿದರು. ಫಾರೆನ್ಸಿಕ್ ತಂಡವನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಎಚ್ಚರಿಕೆ ಅಗತ್ಯ
ಈ ಘಟನೆಯ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮುಚ್ಚಿದ ಮಲಗುವ ಕೋಣೆಯಲ್ಲಿ ಹೋಗೆ, ಹೀಟರ್ ಅಥವಾ ಬಾಯ್ಲರ್ ಗಳನ್ನು ಬಳಸಬೇಡಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿದ್ರಿಸುವ ವೇಳೆ ಕೊಠಡಿಯಲ್ಲಿ ಸಮರ್ಪಕ ಗಾಳಿ ಬೆಳಕು (ವಿಂಟಿಲೇಶನ್) ಇರಲಿ ಎಂದು ಮನವಿ ಮಾಡಿದ್ದಾರೆ. ಇಂತಹ ಮುನ್ನೆಚ್ಚರಿಕೆಗಳಿಂದಲೇ ಇಂತಹ ದುರಂತಗಳನ್ನು ತಪ್ಪಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.







