ಇಂತಹವರಿಗೆ ಜೀವನಪೂರ್ತಿ ಉಚಿತ ರೈಲು ಪ್ರಯಾಣ ಘೋಷಣೆ! ಕೇಂದ್ರದ ಹೊಸ ನಿರ್ಧಾರ
ದೇಶಕ್ಕಾಗಿ ಸಾಹಸ ತೋರಿದ ಶೌರ್ಯ ಪ್ರಶಸ್ತಿ ವಿಜೇತ ಸೈನಿಕರಿಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ನೀಡಿದೆ. ಇನ್ನು ಮುಂದೆ ಅವರಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ಕುಟುಂಬ ಸದಸ್ಯರಿಗೆ ಜೀವನಪೂರ್ತಿ ಉಚಿತ ರೈಲು ಪ್ರಯಾಣ ಸೌಲಭ್ಯ ದೊರೆಯಲಿದೆ.

Free Train Travel: ದೇಶ ರಕ್ಷಣೆಗಾಗಿ ಅಪಾರ ಧೈರ್ಯ ತೋರಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ದೇಶದಾದ್ಯಂತ ಜೀವನಪೂರ್ತಿ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡಲು ಸರ್ಕಾರ ಘೋಷಿಸಿದೆ. ಈ ಕ್ರಮ ಸೈನಿಕರ ತ್ಯಾಗ ಮತ್ತು ಸಾಹಸವನ್ನು ಗೌರವಿಸುವ ಒಂದು ವಿಶೇಷ ಪ್ರಯತ್ನವಾಗಿದೆ.
ಇದರಿಂದ ಶೌರ್ಯ ಪ್ರಶಸ್ತಿ ವಿಜೇತರು ದೇಶದ ಯಾವುದೇ ಭಾಗಕ್ಕೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಭಾರತೀಯ ರೈಲ್ವೆಯ ಫಸ್ಟ್ ಕ್ಲಾಸ್, ಸೆಕೆಂಡ್ ಎಸಿ ಮತ್ತು ಎಸಿ ಚೇರ್ ಕಾರ್ ಕೋಚ್ಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ.
ಕುಟುಂಬ ಸದಸ್ಯರಿಗೂ ಸೌಲಭ್ಯ
ಪ್ರಶಸ್ತಿ ವಿಜೇತ ಸೈನಿಕರು ಬದುಕಿರುವವರೆಗೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಸೈನಿಕರು ನಿಧನರಾದರೆ ಅವರ ಪತ್ನಿ ಅಥವಾ ಪತಿ ಈ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯಬಹುದು. ಆದರೆ ಸಂಗಾತಿ ಮರುಮದುವೆ ಮಾಡಿಕೊಂಡರೆ ಈ ಸೌಲಭ್ಯ ಅನ್ವಯಿಸುವುದಿಲ್ಲ ಎಂಬ ನಿಯಮವೂ ಇದೆ.
ಇನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ, ಉದಾಹರಣೆಗೆ ವಿವಾಹವಾಗದ ಸೈನಿಕರಿಗೆ ಮರಣಾನಂತರ ಪ್ರಶಸ್ತಿ ನೀಡಿದರೆ, ಅವರ ಪೋಷಕರಿಗೂ ಮತ್ತು ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಚರನಿಗೂ ಉಚಿತ ರೈಲು ಪ್ರಯಾಣ ಅವಕಾಶ ದೊರೆಯುತ್ತದೆ.
ಸೈನಿಕರಿಗೆ ಉದ್ಯೋಗಾವಕಾಶಗಳಲ್ಲೂ ಸಹಾಯ
ಸೈನಿಕರು ಸೇವೆಯಿಂದ ನಿವೃತ್ತಿಯಾದ ನಂತರ ನಾಗರಿಕ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಸಹಾಯ ಮಾಡುವತ್ತವೂ ರೈಲ್ವೆ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಮಾಜಿ ಅಗ್ನಿವೀರರು ಮತ್ತು ನಿವೃತ್ತ ಸೈನಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೆಲವು ಹುದ್ದೆಗಳಲ್ಲಿ ಮೀಸಲಾತಿ ನೀಡಲಾಗಿದೆ.
ಲೆವೆಲ್-2 ಹಾಗೂ ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿ 10 ಶೇಕಡಾ, ಲೆವೆಲ್-1 ಹುದ್ದೆಗಳಲ್ಲಿ 20 ಶೇಕಡಾ ಮೀಸಲಾತಿ ನೀಡಲಾಗಿದೆ. 2024 ಮತ್ತು 2025ರ ಅವಧಿಯಲ್ಲಿ ಸಾವಿರಾರು ಮಾಜಿ ಸೈನಿಕರನ್ನು ರೈಲ್ವೆ ಉದ್ಯೋಗಗಳಲ್ಲಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೌರ್ಯ ಪ್ರಶಸ್ತಿಗಳ ಮಹತ್ವ
ಸೈನ್ಯದಲ್ಲಿ ಅತ್ಯುತ್ತಮ ಧೈರ್ಯ ಮತ್ತು ಸಾಹಸ ತೋರಿದವರಿಗೆ ಕೇಂದ್ರ ಸರ್ಕಾರ ಹಲವು ಶೌರ್ಯ ಪ್ರಶಸ್ತಿಗಳನ್ನು ನೀಡುತ್ತದೆ. ವೀರ ಚಕ್ರ, ಮಹಾವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಮೊದಲಾದ ಪ್ರಶಸ್ತಿಗಳು ದೇಶದ ಅತ್ಯಂತ ಗೌರವಾನ್ವಿತ ಸೈನಿಕ ಪ್ರಶಸ್ತಿಗಳಾಗಿವೆ.
ಈ ಪ್ರಶಸ್ತಿಗಳನ್ನು ಪಡೆದ ಸೈನಿಕರಿಗೆ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡುವ ಮೂಲಕ ಅವರ ಸೇವೆಯನ್ನು ದೇಶ ಗೌರವಿಸುತ್ತಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.







