ಎವರೆಸ್ಟ್ ಮಸಾಲೆಗೆ FSSAI ಶಾಕ್: 3 ಮಸಾಲೆಗಳ ಮಾರಾಟಕ್ಕೆ ಬ್ರೇಕ್!
ಎವರೆಸ್ಟ್ ಮಸಾಲೆಗಳಿಗೆ FSSAI ನಿರ್ಬಂಧ ವಿಧಿಸಿದ್ದು, ಪರೀಕ್ಷೆಯಲ್ಲಿ ನಿಗದಿತ ಗುಣಮಟ್ಟದ ಮಾನದಂಡಗಳ ಉಲ್ಲಂಘನೆ ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಮಾರಾಟ ನಿಲ್ಲಿಸಿ ಕಂಪನಿಯಿಂದ ವಿವರಣೆ ಕೇಳಿದ್ದಾರೆ.

- ಎವರೆಸ್ಟ್ ಮಸಾಲೆಗಳಿಗೆ FSSAI ನಿರ್ಬಂಧ
- ಇಂಗುವಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪಿಷ್ಟ
- ಮಸಾಲೆಗಳ ಗುಣಮಟ್ಟ ಕುರಿತು ಅಧಿಕಾರಿಗಳಿಂದ ಕಠಿಣ ಕ್ರಮ
ಜನಪ್ರಿಯ ಮಸಾಲೆ ಬ್ರ್ಯಾಂಡ್ ಎವರೆಸ್ಟ್‌ಗೆ (Everest) ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಶಾಕ್ ನೀಡಿದೆ. ಕಂಪನಿಗೆ ಸಂಬಂಧಿಸಿದ ಕೆಲವು ಮಸಾಲೆ ಉತ್ಪನ್ನಗಳನ್ನು ಪರೀಕ್ಷಿಸಿದ ವೇಳೆ ನಿಗದಿತ ಗುಣಮಟ್ಟದ ಮಾನದಂಡಗಳಲ್ಲಿ ಲೋಪ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರೊಬ್ಬರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಂಬೈ ಹಾಗೂ ಗುಜರಾತ್‌ನ ಅಂಬೆರ್ಗಾವ್‌ನಲ್ಲಿರುವ ಎವರೆಸ್ಟ್ ಮಸಾಲೆ ತಯಾರಿಕಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ನಂತರ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪರೀಕ್ಷೆಯ ವೇಳೆ ಇಂಗುವು (Asafoetida) ಸೇರಿದಂತೆ ಕೆಲವು ಉತ್ಪನ್ನಗಳಲ್ಲಿ ಅಗತ್ಯ ಗುಣಮಟ್ಟ ಕಾಪಾಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಸಂಬಂಧಿತ ಮೂರು ಬಗೆಯ ಮಸಾಲೆಗಳ ಮಾರಾಟಕ್ಕೆ ನಿರ್ಬಂಧ ವಿಧಿಸಿ, ಮುಂದಿನ ಕ್ರಮಗಳ ಕುರಿತು ಕಂಪನಿಯಿಂದ ಸ್ಪಷ್ಟನೆ ಕೇಳಲಾಗಿದೆ.
ಇಂಗುವಿನಲ್ಲಿ ಪಿಷ್ಟದ ಪ್ರಮಾಣ ಎಷ್ಟು?
FSSAI ನಿಯಮಗಳ ಪ್ರಕಾರ ಇಂಗುವಿನಲ್ಲಿ ಆಲ್ಕೋಹಾಲ್‌ನಲ್ಲಿ ಕರಗುವ ಪದಾರ್ಥ ಕನಿಷ್ಠ 5 ಪ್ರತಿಶತ ಇರಬೇಕೆಂದು ನಿಗದಿಪಡಿಸಲಾಗಿದೆ. ಆದರೆ ಪರೀಕ್ಷೆಗೆ ಒಳಪಡಿಸಿದ ಎವರೆಸ್ಟ್ ಇಂಗುವಿನಲ್ಲಿ ಈ ಪ್ರಮಾಣ ಶೂನ್ಯದಿಂದ 3 ಪ್ರತಿಶತದಷ್ಟೇ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ತಯಾರಿಕೆಯಲ್ಲಿ ಬಳಸಬೇಕಾದ ಪ್ರಮಾಣಕ್ಕಿಂತ ಸುಮಾರು 30ರಿಂದ 40 ಪ್ರತಿಶತದಷ್ಟು ಕಡಿಮೆ ಕಚ್ಚಾ ಇಂಗುವನ್ನು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಲಾಲ್‌ಜೀ ಗೋಧೂ ಘಟಕದಿಂದ ಸಂಗ್ರಹಿಸಿದ ಆರು ಬಗೆಯ ಕಚ್ಚಾ ಇಂಗುವಿನ ಮಾದರಿಗಳಲ್ಲಿಯೂ ಪಿಷ್ಟದ (Starch) ಪ್ರಮಾಣ 15ರಿಂದ 32 ಪ್ರತಿಶತದವರೆಗೆ ಕಂಡುಬಂದಿದೆ. ಆದರೆ ನಿಗದಿತ ಮಾನದಂಡದ ಪ್ರಕಾರ ಇಂಗುವಿನಲ್ಲಿ ಪಿಷ್ಟದ ಪ್ರಮಾಣ ಶೇ.1ಕ್ಕಿಂತ ಹೆಚ್ಚಿರಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಂಪನಿಗೆ ಅಧಿಕಾರಿಗಳ ಸೂಚನೆ
ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ದೇಶಾದ್ಯಂತ ಪರಿಶೀಲನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಹೋಟೆಲ್‌ಗಳು ಹಾಗೂ ಆಹಾರ ಉತ್ಪನ್ನಗಳ ತಯಾರಿಕಾ ಘಟಕಗಳಲ್ಲಿಯೂ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ನಿಯಮ ಉಲ್ಲಂಘನೆಗೆ ಕಾರಣವೇನು ಮತ್ತು ಮುಂದಿನ ದಿನಗಳಲ್ಲಿ ನಿಗದಿತ ಮಾನದಂಡಗಳನ್ನು ಪಾಲಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ವಿವರಿಸುವಂತೆ FSSAI ಅಧಿಕಾರಿಗಳು ಎವರೆಸ್ಟ್ ಕಂಪನಿಗೆ ಸೂಚಿಸಿದ್ದಾರೆ.



