ಸಿಲಿಂಡರ್ ಭಾಗ್ಯ: ವರ್ಷಕ್ಕೆ 3 ಸಿಲಿಂಡರ್ ಉಚಿತ, ಈ ರಾಜ್ಯದ ಜನರಿಗೆ ಭರ್ಜರಿ ಗುಡ್‌ನ್ಯೂಸ್
ಗೋವಾದ ಅರ್ಹ ನಾಗರಿಕರಿಗೆ ಪ್ರತಿ ವರ್ಷ ಮೂರು ಎಲ್‌ಪಿಜಿ ಸಿಲಿಂಡರ್‌ಗಳ ವೆಚ್ಚಕ್ಕಾಗಿ 3,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು, ಅರ್ಜಿ ನಮೂನೆಗಳು ಪಂಚಾಯತ್‌ಗಳಲ್ಲಿ ಲಭ್ಯವಿರಲಿವೆ.

ಪಣಜಿ: ಗೋವಾ ಸರ್ಕಾರ (Goa Government) ಅರ್ಹ ನಾಗರಿಕರಿಗೆ ಮಹತ್ವದ ಸೌಲಭ್ಯ ಘೋಷಿಸಿದ್ದು, ಪ್ರತಿ ವರ್ಷ ಮೂರು ಎಲ್‌ಪಿಜಿ ಸಿಲಿಂಡರ್ (LPG Cylinders) ಪಡೆಯಲು 3,000 ರೂ. ಸಹಾಯಧನ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 9ರಿಂದಲೇ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ಎಲ್‌ಪಿಜಿ ಸಿಲಿಂಡರ್ ವೆಚ್ಚಕ್ಕಾಗಿ ವಾರ್ಷಿಕ 3,000 ರೂ. ಜಮೆಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರಿಂದ ಅರ್ಹ ಕುಟುಂಬಗಳಿಗೆ ಅಡುಗೆ ಅನಿಲದ ಖರ್ಚಿನಲ್ಲಿ ಸ್ವಲ್ಪ ಮಟ್ಟಿನ ಉಳಿತಾಯವಾಗಲಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಅಗತ್ಯವಿರುವ ಅರ್ಜಿ ನಮೂನೆಗಳು (Application Form) ಸೆಪ್ಟೆಂಬರ್ 5ರಿಂದ ಲಭ್ಯವಾಗಲಿವೆ. ಸಂಬಂಧಪಟ್ಟವರು ತಮ್ಮ ಸ್ಥಳೀಯ ಪಂಚಾಯತ್ ಕಚೇರಿ ಅಥವಾ ಶಾಸಕರ ಬಳಿ ಅರ್ಜಿ ನಮೂನೆ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
2022ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಅರ್ಹ ಫಲಾನುಭವಿಗಳಿಗೆ ಪ್ರತಿ ವರ್ಷ ಮೂರು ಸಿಲಿಂಡರ್‌ಗಳ ಮೊತ್ತವನ್ನು ನೇರವಾಗಿ ನೀಡುವ ಮೂಲಕ ಯೋಜನೆಯ ಪ್ರಯೋಜನ ತಲುಪಿಸುವ ಉದ್ದೇಶ ಸರ್ಕಾರದ್ದಾಗಿದೆ. ಯೋಜನೆಯಡಿ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳಬಹುದಾಗಿದೆ.



