ಭಿಕ್ಷೆ ಬೇಡಿ ಚಿಕಿತ್ಸೆ ಕೊಡಿಸಿದ ಪತ್ನಿ, ಹಠಾತ್ ನಿಧನ; ಆಕೆಯ ನೆನಪಿಗಾಗಿ ಗುಡಿ ಕಟ್ಟುತ್ತಿರುವ ಪತಿ
ತನ್ನ ಜೀವ ಉಳಿಸಲು ಮನೆ ಸಾಮಗ್ರಿಗಳನ್ನೇ ಮಾರಿ, ಕೊನೆಗೆ ಭಿಕ್ಷೆ ಬೇಡಿ ಪತಿಗೆ ಚಿಕಿತ್ಸೆ ಕೊಡಿಸಿದ್ದ ಪತ್ನಿಯ ತ್ಯಾಗವನ್ನು ಮರೆಯದ 65 ವರ್ಷದ ವ್ಯಕ್ತಿ, ಆಕೆಯ ನೆನಪಿಗಾಗಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ.

- ಪತಿಯ ಜೀವ ಉಳಿಸಲು ಪತ್ನಿಯ ಹೋರಾಟ
- ಭಿಕ್ಷೆ ಬೇಡಿ ಚಿಕಿತ್ಸೆ ಕೊಡಿಸಿದ ಪತ್ನಿ
- ಸಾವಿನ ಬಳಿಕ ಪತ್ನಿಗಾಗಿ ದೇವಸ್ಥಾನ ನಿರ್ಮಾಣ
Husband Builds Temple in Memory of Wife: ಹಣ, ಆಸ್ತಿ, ಅಂತಸ್ತು ಎಲ್ಲಕ್ಕಿಂತ ಮನುಷ್ಯ ಸಂಬಂಧಗಳು ದೊಡ್ಡವು ಎಂಬುದನ್ನು ಗುಜರಾತ್‌ನ (Gujarat) ಈ ದಂಪತಿಯ ಕಥೆ ಮತ್ತೊಮ್ಮೆ ನೆನಪಿಸಿದೆ. ಕಷ್ಟದ ಸಮಯದಲ್ಲಿ ತನ್ನ ಕೈಬಿಡದೆ ಜೀವ ಉಳಿಸಿದ ಪತ್ನಿಯನ್ನು ದೇವತೆಯಂತೆ ಕಾಣುತ್ತಿರುವ ವ್ಯಕ್ತಿಯೊಬ್ಬರು, ಆಕೆಯ ನೆನಪಿಗಾಗಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಪತ್ನಿ ಬದುಕಿದ್ದಾಗ ಮಾಡಿದ ಸಹಾಯವನ್ನು ಮರೆಯಲಾಗದೆ, ಆಕೆ ಇಲ್ಲದಿದ್ದರೂ ತನ್ನ ಪ್ರೀತಿಯನ್ನು ವಿಶೇಷ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ನಿವಾಸಿ 65 ವರ್ಷದ ಬಾಬುಭಾಯಿ ಲಿಂಬಾ (Babubhai Limba) ಈ ಅಪರೂಪದ ನಿರ್ಧಾರ ಕೈಗೊಂಡಿದ್ದಾರೆ. 2007ರಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಅವರು ಎಡಗೈಯನ್ನು ಕಳೆದುಕೊಂಡಿದ್ದರು. ಈ ಘಟನೆ ಅವರ ಬದುಕನ್ನೇ ಬದಲಿಸಿತ್ತು. ಆರು ಮಕ್ಕಳಿದ್ದ ಕುಟುಂಬದಲ್ಲಿ ದುಡಿಯುವ ಪ್ರಮುಖ ವ್ಯಕ್ತಿಯಾಗಿದ್ದ ಬಾಬುಭಾಯಿಗೆ ಅಪಘಾತದ ನಂತರ ಜೀವನ ನಿರ್ವಹಿಸುವುದೇ ದೊಡ್ಡ ಸವಾಲಾಗಿತ್ತು.
ಆ ಸಮಯದಲ್ಲಿ ಪತ್ನಿ ಸುಂಘದಿಬೆನ್ (Sunghadiben) ತೋರಿದ ಧೈರ್ಯವನ್ನು ಅವರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪತಿಯ ಚಿಕಿತ್ಸೆಗೆ ಹಣ ಹೊಂದಿಸಲು ಮನೆಯಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಮಾರಾಟ ಮಾಡಿದ್ದರು. ಆದರೂ ಆಸ್ಪತ್ರೆಯ ಖರ್ಚು ಭರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದಾಗ, ಕೊನೆಗೆ ಮನೆಮನೆಗೆ ತೆರಳಿ ಭಿಕ್ಷೆ ಬೇಡುವ ನಿರ್ಧಾರ ಮಾಡಿದರು.
ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ ಪತಿಯ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಲಿಲ್ಲ. ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಿಂದ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗಳಿಗೆ ಅಲೆದಾಡಿ ಅವರ ಜೀವ ಉಳಿಸಲು ಹೋರಾಡಿದರು. ಆರು ಮಕ್ಕಳ ಜವಾಬ್ದಾರಿಯ ನಡುವೆಯೂ ಪತಿಗೆ ಧೈರ್ಯ ತುಂಬಿ ಬದುಕಿನ ಆಸರೆಯಾಗಿ ನಿಂತಿದ್ದರು.
ಆದರೆ, ಕಳೆದ ವರ್ಷ ಸುಂಘದಿಬೆನ್ ನಿಧನರಾದರು. ಪತ್ನಿಯ ಅಗಲಿಕೆಯಿಂದ ತೀವ್ರ ನೋವಿಗೆ ಒಳಗಾದ ಬಾಬುಭಾಯಿ, ಆಕೆಯ ನೆನಪುಗಳನ್ನು ಶಾಶ್ವತವಾಗಿಡಲು ನಿರ್ಧರಿಸಿದರು. ಇದೀಗ ಗೋಧ್ರಾದ ಅಬ್ರಾಮ್ ಪಟೇಲ್ ಮುವಾದ್ ಪ್ರದೇಶದಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಪತ್ನಿಗಾಗಿ ದೇವಸ್ಥಾನ ನಿರ್ಮಿಸುವ ಕೆಲಸ ಆರಂಭಿಸಿದ್ದಾರೆ.
ಈ ಕಾರ್ಯಕ್ಕೆ ಅವರ 15 ಸದಸ್ಯರ ಅವಿಭಕ್ತ ಕುಟುಂಬವೂ ಬೆಂಬಲ ನೀಡುತ್ತಿದೆ. ಪತ್ನಿಯ ಬಗ್ಗೆ ಮಾತನಾಡುವಾಗ ಭಾವುಕರಾಗುವ ಬಾಬುಭಾಯಿ, ಕಷ್ಟದ ದಿನಗಳಲ್ಲಿ ಆಕೆ ಜೊತೆಗಿರದಿದ್ದರೆ ತಾನು ಬದುಕುಳಿಯುತ್ತಿರಲಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ. ಆಕೆಯ ತ್ಯಾಗಕ್ಕೆ ಜೀವನಪೂರ್ತಿ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನೋಡುತ್ತೇವೆ. ಆದರೆ, ತನ್ನ ಬದುಕನ್ನೇ ಉಳಿಸಿದ ಪತ್ನಿಯ ಸೇವೆಯನ್ನು ದೇವರ ಸ್ಥಾನದಲ್ಲಿ ಇರಿಸಿರುವ ಈ ವ್ಯಕ್ತಿಯ ನಿರ್ಧಾರ ಇದೀಗ ಗಮನ ಸೆಳೆಯುತ್ತಿದೆ. ಪ್ರೀತಿ ಎಂದರೆ ಕೇವಲ ಜೊತೆಯಾಗಿ ಬದುಕುವುದಲ್ಲ, ಸಂಕಷ್ಟ ಬಂದಾಗ ಕೈಹಿಡಿದು ನಿಲ್ಲುವುದೂ ಹೌದು ಎಂಬುದಕ್ಕೆ ಈ ಘಟನೆ ಭಾವನಾತ್ಮಕ ಉದಾಹರಣೆಯಾಗಿದೆ.



