10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ

ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದ್ದು, 10ನೇ ತರಗತಿ ಉತ್ತೀರ್ಣರಾದ 18ರಿಂದ 40 ವರ್ಷದ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಲಭ್ಯವಾಗಿದೆ.

India Post GDS Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ (India Post) ಉದ್ಯೋಗ ಪಡೆಯಲು ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಗ್ರಾಮೀಣ ಡಾಕ್ ಸೇವಕ್ (GDS Recruitment) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು, ದೇಶಾದ್ಯಂತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಲ್ಲಿ 10ನೇ ತರಗತಿ ಉತ್ತೀರ್ಣರಾಗಿರುವುದು ಪ್ರಮುಖ ಅರ್ಹತೆಯಾಗಿದೆ. ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಜೊತೆಗೆ ಸಂಬಂಧಪಟ್ಟ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನವೂ ಇರಬೇಕು.

ವಯೋಮಿತಿಯ ವಿಚಾರದಲ್ಲೂ ಅಭ್ಯರ್ಥಿಗಳು ಗಮನಹರಿಸಬೇಕು. ಅರ್ಜಿ ಸಲ್ಲಿಸುವವರ ವಯಸ್ಸು 18ರಿಂದ 40 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಬಹುದು.

ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದಲ್ಲಿ ಆಯ್ಕೆ

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ (No Written Exam) ಇರುವುದಿಲ್ಲ. ಅಭ್ಯರ್ಥಿಗಳ 10ನೇ ತರಗತಿ ಅಂಕಗಳನ್ನು ಆಧರಿಸಿ ಕಂಪ್ಯೂಟರ್ ವ್ಯವಸ್ಥೆಯ ಮೂಲಕ ಮೆರಿಟ್ ಪಟ್ಟಿ (Merit List) ಸಿದ್ಧಪಡಿಸಲಾಗುತ್ತದೆ. ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಇಲಾಖೆಯು ಆನ್‌ಲೈನ್ ಮೂಲಕ ಪರಿಶೀಲಿಸಲಿದೆ. ಎಪಿಐ ಸೇತು, ಡಿಜಿಲಾಕರ್ ಅಥವಾ ಸಂಬಂಧಪಟ್ಟ ಶಿಕ್ಷಣ ಮಂಡಳಿಯ ಅಧಿಕೃತ ವೇದಿಕೆಗಳ ಮೂಲಕ ದಾಖಲೆಗಳ ದೃಢೀಕರಣ ನಡೆಯಲಿದೆ ಎಂದು ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು ಇಲ್ಲಿವೆ

ಒನ್‌ಟೈಮ್ ನೋಂದಣಿ ಪ್ರಕ್ರಿಯೆ ಆಗಸ್ಟ್ 31ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 19ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 2ರಿಂದ ಆರಂಭವಾಗಿ ಸೆಪ್ಟೆಂಬರ್ 21ರಂದು ಮುಕ್ತಾಯಗೊಳ್ಳಲಿದೆ.

ಅರ್ಜಿಯಲ್ಲಿ ಯಾವುದೇ ತಪ್ಪುಗಳು ಕಂಡುಬಂದರೆ ಅವುಗಳನ್ನು ಸರಿಪಡಿಸಲು ಸೆಪ್ಟೆಂಬರ್ 23ರಿಂದ 24ರವರೆಗೆ ತಿದ್ದುಪಡಿ ಅವಕಾಶ (Correction Window) ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಒಳಿತು.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ (indiapost.gov.in) ಭೇಟಿ ನೀಡಿ GDS ನೇಮಕಾತಿ 2026 ನೋಂದಣಿ ಲಿಂಕ್ ಆಯ್ಕೆ ಮಾಡಬೇಕು. ನಂತರ ಅಗತ್ಯ ಮೂಲ ವಿವರಗಳನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಬೇಕು.

ನೋಂದಣಿ ಮುಗಿದ ಬಳಿಕ ಲಾಗಿನ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳು ಹಾಗೂ ನಿಗದಿತ ಅರ್ಜಿ ಶುಲ್ಕವನ್ನು ಸಲ್ಲಿಸಿದ ನಂತರ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ಬಳಿಕ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಂಡು ಭವಿಷ್ಯದ ಬಳಕೆಗಾಗಿ ಮುದ್ರಣ ಪ್ರತಿಯನ್ನು ಇಟ್ಟುಕೊಳ್ಳುವುದು ಉತ್ತಮ.

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ವಯೋಮಿತಿ, ಶುಲ್ಕ ಹಾಗೂ ಇತರ ನಿಯಮಗಳನ್ನು ಅಭ್ಯರ್ಥಿಗಳು ಪರಿಶೀಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ವನ್ನೇ ಅವಲಂಬಿಸುವುದು ಸೂಕ್ತ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories