ಆಂಧ್ರಕ್ಕೆ ಹೂಡಿಕೆ ಮಾಹಿತಿ ಸೋರಿಕೆ; ತಮಿಳುನಾಡಿನಲ್ಲಿ 15 ಅಧಿಕಾರಿಗಳ ವಜಾ ಮಾಡಿದ ಸಿಎಂ ವಿಜಯ್
ರಾಜ್ಯಕ್ಕೆ ಬರಬೇಕಿದ್ದ ಉದ್ಯಮ ಯೋಜನೆಗಳು ಆಂಧ್ರಪ್ರದೇಶಕ್ಕೆ ವರ್ಗಾವಣೆಯಾದ ಬೆನ್ನಲ್ಲೇ ತಮಿಳುನಾಡಿನಲ್ಲಿ ಗೌಪ್ಯ ಮಾಹಿತಿ ಸೋರಿಕೆ ಆರೋಪ ಕೇಳಿಬಂದಿದೆ. ತನಿಖೆ ಬಳಿಕ ಮುಖ್ಯಮಂತ್ರಿ ವಿಜಯ್ ಸರ್ಕಾರ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ.

- 15 ಹಿರಿಯ ಅಧಿಕಾರಿಗಳ ವಿರುದ್ಧ ಸರ್ಕಾರದ ಕ್ರಮ
- ಆಂಧ್ರಪ್ರದೇಶಕ್ಕೆ ಮಾಹಿತಿ ತಲುಪಿದ ಶಂಕೆ
- ಮೂರು ಅಧಿಕಾರಿಗಳು ಆಂಧ್ರ ಸರ್ಕಾರದಲ್ಲಿ ಕೆಲಸ
ಚೆನ್ನೈ: ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದ ಕೆಲವು ಕಂಪನಿಗಳು ಕೊನೆಗೆ ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಇದೀಗ ಎರಡು ರಾಜ್ಯಗಳ ನಡುವೆ ವಿವಾದದ ಕಿಡಿ ಹೊತ್ತಿಸಿದೆ. ಉದ್ಯಮಗಳ ಹೂಡಿಕೆ ಯೋಜನೆಗಳ ಬಗ್ಗೆ ಮೊದಲೇ ಮಾಹಿತಿ ಸೋರಿಕೆಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ ಎಂಬ ಅನುಮಾನ ತಮಿಳುನಾಡು ಸರ್ಕಾರದಲ್ಲಿ ಮೂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ನೇತೃತ್ವದ ಸರ್ಕಾರ 15 ಹಿರಿಯ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಿದೆ. ಹೂಡಿಕೆದಾರರನ್ನು ರಾಜ್ಯಕ್ಕೆ ಆಕರ್ಷಿಸುವ ಪ್ರಮುಖ ಸರ್ಕಾರಿ ಸಂಸ್ಥೆಯಾದ ಗೈಡೆನ್ಸ್ ತಮಿಳುನಾಡು (Guidance Tamil Nadu) ವಿಭಾಗದಲ್ಲಿ ಈ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಕಂಪನಿಗಳು ಹೂಡಿಕೆ ಮಾಡಲು ತೋರಿದ್ದ ಆಸಕ್ತಿ, ಯೋಜನೆಗಳ ವಿವರ ಹಾಗೂ ಸರ್ಕಾರದ ಕಾರ್ಯತಂತ್ರದ ಮಾಹಿತಿ ಬೇರೆ ರಾಜ್ಯಕ್ಕೆ ತಲುಪಿರಬಹುದು ಎಂಬ ಆರೋಪ ಕೇಳಿಬಂದಿದೆ.
ಈ ಬೆಳವಣಿಗೆಯಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೂ ಹೊರಬಂದಿದೆ. ವಜಾಗೊಂಡಿರುವ 15 ಅಧಿಕಾರಿಗಳಲ್ಲಿ ಮೂವರು ಈಗ ಆಂಧ್ರಪ್ರದೇಶ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಹೂಡಿಕೆ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹೊರಗೆ ನೀಡಲಾಗಿತ್ತೇ ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ.
ವಜಾಗೊಂಡ ಅಧಿಕಾರಿಗಳ ನೇಮಕಾತಿಯ ಹಿನ್ನೆಲೆಯೂ ಈಗ ರಾಜಕೀಯ ಚರ್ಚೆಗೆ ಬಂದಿದೆ. ಇವರಲ್ಲಿ ಹೆಚ್ಚಿನವರು 2016ರಿಂದ 2021ರವರೆಗೆ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದರು. ನಂತರ ಡಿಎಂಕೆ ಆಡಳಿತದಲ್ಲಿಯೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದರು.
ಇನ್ನು ಸರ್ಕಾರದ ಈ ಕ್ರಮಕ್ಕೆ ಡಿಎಂಕೆ ನಾಯಕ ಹಾಗೂ ಮಾಜಿ ಕೈಗಾರಿಕಾ ಸಚಿವ ಟಿಆರ್ಬಿ ರಾಜಾ (TRB Rajaa) ವಿರೋಧ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಅನುಭವ ಮತ್ತು ಪರಿಣತಿಯಿಂದ ಬೆಳೆದಿರುವ ಸರ್ಕಾರಿ ಸಂಸ್ಥೆಯ ಮೇಲೆ ರಾಜಕೀಯ ಆರೋಪಗಳನ್ನು ಹೊರಿಸುವುದು ಸರಿಯಲ್ಲ ಎಂಬುದು ಅವರ ವಾದ.
ಕೆಲವು ಉದ್ಯೋಗಿಗಳು ಸಂಸ್ಥೆಯನ್ನು ತೊರೆದ ಮಾತ್ರಕ್ಕೆ ತಮಿಳುನಾಡಿನ ಕೈಗಾರಿಕಾ ವ್ಯವಸ್ಥೆ ದುರ್ಬಲವಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಸಂಸ್ಥೆಯನ್ನು ನಿರ್ಮಿಸಲು ಹಲವು ವರ್ಷಗಳ ಶ್ರಮವಿದೆ. ಅದನ್ನು ರಾಜಕೀಯ ಕಾರಣಗಳಿಗೆ ವಿವಾದಕ್ಕೆ ಎಳೆಯಬಾರದು ಎಂದು ಎಕ್ಸ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ, ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ತೆಲುಗು ದೇಶಂ ಪಕ್ಷ (TDP) ಈ ಆರೋಪಗಳನ್ನು ನಿರಾಕರಿಸಿದೆ. ಹೀಗಾಗಿ ಹೂಡಿಕೆ ಮಾಹಿತಿ ಸೋರಿಕೆ ಪ್ರಕರಣ ಈಗ ಆಡಳಿತಾತ್ಮಕ ವಿಚಾರದ ಜೊತೆಗೆ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ.



