Viral Video: ಸ್ಕೂಟಿಗೆ ಟಚ್ ಆಯ್ತು ಅಂತ ರಾಯಲ್ ಎನ್‌ಫೀಲ್ಡ್ ಬೈಕ್ ಧ್ವಂಸ ಮಾಡಿದ ಮಹಿಳೆ

ಜೈಪುರದಲ್ಲಿ ಸ್ಕೂಟಿಗೆ ಸ್ವಲ್ಪ ಡಿಕ್ಕಿಯಾದ ಕಾರಣ ಮಹಿಳೆ ಕೋಪಗೊಂಡು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಹೆಲ್ಮೆಟ್ ಮತ್ತು ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟ್ರಾಫಿಕ್ ಜಾಮ್ ನಡುವೆ ರಾಯಲ್ ಎನ್‌ಫೀಲ್ಡ್ ಬೈಕ್ ಒಂದು ಸ್ಕೂಟಿಗೆ ಸ್ವಲ್ಪವಾಗಿ ತಾಕಿದ ಘಟನೆ ನಂತರ ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು.

ಈ ಘಟನೆ ಗುರುವಾರ ಜೈಪುರದ ಇರುಕಾದ ರಸ್ತೆಯಲ್ಲಿ ಸಂಭವಿಸಿದೆ. ಟ್ರಾಫಿಕ್ ದಟ್ಟಣೆ ಕಾರಣದಿಂದ ವಾಹನಗಳು ನಿಧಾನವಾಗಿ ಸಾಗುತ್ತಿದ್ದಾಗ ಬೈಕ್ ಸ್ಕೂಟಿಗೆ ಸ್ವಲ್ಪವಾಗಿ ತಾಕಿದೆ ಎಂದು ತಿಳಿದುಬಂದಿದೆ.

ಕೋಪಗೊಂಡ ಮಹಿಳೆಯ ಆಕ್ರೋಶ

ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಈ ಘಟನೆಯ ನಂತರ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಬೈಕ್ ಸವಾರನೊಂದಿಗೆ ವಾಗ್ವಾದ ನಡೆಸಿದ ಆಕೆ ನಂತರ ಕೋಪವನ್ನು ನಿಯಂತ್ರಿಸಿಕೊಳ್ಳಲಾಗದೆ ಬೈಕ್ ಮೇಲೆ ದಾಳಿ ಮಾಡಿದರೆಂದು ಸ್ಥಳೀಯರು ಹೇಳಿದ್ದಾರೆ.

ಮೊದಲು ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಬೈಕ್‌ಗೆ ಹೊಡೆದ ಮಹಿಳೆ, ನಂತರ ಕಲ್ಲು ಮತ್ತು ಇಟ್ಟಿಗೆ ಬಳಸಿ ರಾಯಲ್ ಎನ್‌ಫೀಲ್ಡ್ ಬೈಕ್‌ನ ಹೆಡ್‌ಲೈಟ್‌, ಸ್ಪೀಡೋಮೀಟರ್ ಹಾಗೂ ಸೈಡ್ ಲೈಟ್‌ಗಳನ್ನು ಒಡೆದಿದ್ದಾರೆ.

ಬೈಕ್ ಮಾಲೀಕ ಪೊಲೀಸ್‌ರನ್ನು ಕರೆಸುವುದಾಗಿ ಎಚ್ಚರಿಸಿದರೂ ಮಹಿಳೆ ಅದನ್ನು ಲೆಕ್ಕಿಸದೆ ‘ಪೊಲೀಸ್ ಕರೆಸಿ, ನನಗೆ ಏನೂ ಆಗಲ್ಲ’ ಎಂದು ಪ್ರತಿಕ್ರಿಯಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಬೈಕ್‌ಗೆ ಹಾನಿ ಮಾಡಿದ ಬಳಿಕ ಮಹಿಳೆ ಅಲ್ಲಿಂದ ಹೊರಟು ಹೋಗಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತವೆ.

ವೈರಲ್ ವಿಡಿಯೋ ಬಳಿಕ ಪೊಲೀಸರ ಪ್ರತಿಕ್ರಿಯೆ

ಈ ಘಟನೆಯನ್ನು ಅಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಮಹಿಳೆಯ ವರ್ತನೆಗೆ ವಿರೋಧ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸಂಬಂಧಿತ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Related Stories