ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಭೀಕರ ಕೊಲೆ! ಭಯಾನಕ ಸಿಸಿಟಿವಿ ದೃಶ್ಯ ಇಲ್ಲಿದೆ
ಕಾನ್ಪುರದಲ್ಲಿ ಮನೆ ಹಾಗೂ ಅಂಗಡಿ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ ವ್ಯಾಪಾರಿಯ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- ವ್ಯಾಪಾರಿ ಹತ್ಯೆ; ನಾಲ್ವರ ಮೇಲೆ ಆರೋಪ
- ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ಭೀಕರ ಹಲ್ಲೆ
- CCTV ದೃಶ್ಯದಲ್ಲಿ ಸಂಪೂರ್ಣ ಘಟನೆ ಸೆರೆ
ಕಾನ್ಪುರ (Kanpur): ಮನೆಗಳು ಹಾಗೂ ಮಾರುಕಟ್ಟೆಯ ಎದುರು ಮೂತ್ರ ವಿಸರ್ಜನೆ (urinating) ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೃತರನ್ನು ಅಮಿತ್ ಗುಪ್ತಾ (Amit Gupta) ಎಂದು ಗುರುತಿಸಲಾಗಿದೆ. ಅವರು ಆಟೋಮೊಬೈಲ್ ವ್ಯಾಪಾರ ನಡೆಸುತ್ತಿದ್ದರು. ಘಟನೆ ನಡೆದ ವೇಳೆ ಮಾರುಕಟ್ಟೆಯ ಬಳಿ ನಿಂತಿದ್ದ ಅಮಿತ್, ನಾಲ್ವರು ಯುವಕರು ಅಂಗಡಿ ಹಾಗೂ ಮನೆಗಳ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಗಮನಿಸಿದ್ದರು ಎನ್ನಲಾಗಿದೆ.
ಮಾರುಕಟ್ಟೆಯ ಎದುರಲ್ಲೇ ಮನೆಗಳಿರುವ ಕಾರಣ ಅಲ್ಲಿಗೆ ಮೂತ್ರ ವಿಸರ್ಜನೆ ಮಾಡದಂತೆ ಅಮಿತ್ ನಾಲ್ವರಿಗೆ ಮನವಿ ಮಾಡಿದ್ದರು. ಆದರೆ, ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಯುವಕರು ಅವರೊಂದಿಗೆ ಜಗಳಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಬಳಿಕ ರಸ್ತೆಯಲ್ಲೇ ಅಮಿತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಅಮಿತ್ ಅವರನ್ನು ಕೆಳಗೆ ಬೀಳಿಸಿ ಮನಬಂದಂತೆ ಥಳಿಸಿದ್ದು, ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿದೆ. ಹಲ್ಲೆಯಿಂದ ಅವರು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದು, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಸಂಪೂರ್ಣ ದೃಶ್ಯ ಮನೆಯ ಹೊರಭಾಗದಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿಯಲ್ಲಿ ಆರೋಪಿಗಳು ಅಮಿತ್ ಅವರನ್ನು ಥಳಿಸುತ್ತಿರುವುದು ಹಾಗೂ ಅವರು ನೆಲಕ್ಕೆ ಬಿದ್ದ ನಂತರವೂ ಹಲ್ಲೆ ಮುಂದುವರಿಸಿರುವುದು ಕಂಡುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ತಲೆಗೆ ಆಗಿದ್ದ ಗಂಭೀರ ಗಾಯದಿಂದ ಅವರು ಚೇತರಿಸಿಕೊಳ್ಳಲಿಲ್ಲ. ಹಲ್ಲೆ ನಡೆದ ಎರಡು ದಿನಗಳ ಬಳಿಕ ಅಮಿತ್ ಮೃತಪಟ್ಟಿದ್ದಾರೆ.
ಕುಟುಂಬಸ್ಥರು ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ, ಘಟನೆ ನಡೆದ ಸುಮಾರು 72 ಗಂಟೆಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ. ಸದ್ಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ದೃಶ್ಯದಲ್ಲಿರುವ ಆರೋಪಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಮಿತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ (Postmortem) ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಅಮಿತ್ ಅವರ ಕುಟುಂಬದ ಮೇಲೂ ಈ ಘಟನೆ ದೊಡ್ಡ ಆಘಾತ ತಂದಿದೆ. ಅವರಿಗೆ ಮೂವರು ಸಹೋದರರು ಮತ್ತು ಮೂವರು ಸಹೋದರಿಯರಿದ್ದು, ಘಟನೆಗೂ ಕೆಲವೇ ದಿನಗಳ ಹಿಂದೆ ಅವರ ತಾಯಿ ಮೃತಪಟ್ಟಿದ್ದರು. ಆ ದುಃಖದಿಂದ ಕುಟುಂಬ ಚೇತರಿಸಿಕೊಳ್ಳುವ ಮುನ್ನವೇ ಅಮಿತ್ ಅವರನ್ನು ಕಳೆದುಕೊಂಡಿರುವುದು ಮತ್ತಷ್ಟು ನೋವು ತಂದಿದೆ.
ಅಮಿತ್ ಅವರ ಪತ್ನಿ ಶಾಲಿನಿ ಗುಪ್ತಾ ಮತ್ತು ಸಹೋದರಿ ಶಿವಾನಿ ಸೇರಿದಂತೆ ಕುಟುಂಬಸ್ಥರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಆರೋಪಿಗಳು ಇನ್ನೂ ಹೊರಗಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಿದೆ ಎಂದು ಶಾಲಿನಿ ಹೇಳಿದ್ದಾರೆ.
ಸಣ್ಣ ವಿಚಾರಕ್ಕೆ ಆರಂಭವಾದ ಜಗಳವೊಂದು ವ್ಯಕ್ತಿಯ ಸಾವಿನಲ್ಲಿ ಅಂತ್ಯಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕು ಹಾಗೂ ತಮ್ಮ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅಮಿತ್ ಕುಟುಂಬ ಪೊಲೀಸರಿಗೆ ಮನವಿ ಮಾಡಿದೆ.
Kanpur: A businessman died after allegedly being beaten by drunk men when he objected to them urinating on a road in Kakadev area. Amit Kumar, injured on Sept 5, died on Sept 7. Police identified four suspects and formed four teams to arrest them. pic.twitter.com/6Ks8dSxdxV
— TOI Lucknow (@TOILucknow) September 9, 2026



