ಕರೂರು ವಿಜಯ್ ರ್ಯಾಲಿ ಕಾಲ್ತುಳಿತ ದುರಂತ: ಸಾವಿನ ಸಂಖ್ಯೆ 38ಕ್ಕೆ ಏರಿಕೆ

ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ನಾಯಕ ಹಾಗೂ ನಟ ವಿಜಯ್ ರ್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 38 ಜನ ಮೃತಪಟ್ಟಿದ್ದು, ಅವರಲ್ಲಿ 10 ಮಕ್ಕಳು ಹಾಗೂ 18 ಮಹಿಳೆಯರು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.

TVK Vijay Rally Stampede: ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ನಾಯಕ ವಿಜಯ್ (Actor Vijay) ಅವರ ರ್ಯಾಲಿ ವೇಳೆ ಸಂಭವಿಸಿದ ದುರಂತವು ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಭಾರಿ ಜನಸಂದಣಿ ನಿಯಂತ್ರಣ ತಪ್ಪಿ ತಳ್ಳಾಟ-ನೂಕಾಟದಲ್ಲಿ 38 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 10 ಮಕ್ಕಳು ಮತ್ತು 18 ಮಹಿಳೆಯರು ಸೇರಿದ್ದಾರೆ. ಇನ್ನೂ 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯ ತೀವ್ರತೆ ಹೆಚ್ಚಿದಾಗ, ವಿಜಯ್ ಅವರು ತಮ್ಮ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಜನರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಕೆಲವರಿಗೆ ಸ್ವತಃ ನೀರಿನ ಬಾಟಲಿ ಹಂಚಿದರು. ಆದಾಗ್ಯೂ, ಉಕ್ಕಿ ಹರಿದ ಜನಸಮೂಹವನ್ನು ನಿಯಂತ್ರಿಸಲು ಸಾಧ್ಯವಾಗದೆ, ತೀವ್ರ ಉಸಿರಾಟದ ತೊಂದರೆಯಿಂದ ಹಲವರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ಘಟನೆಯ ಬಗ್ಗೆ ವಿಜಯ್ ಹೃದಯವಿದ್ರಾವಕ ಟ್ವೀಟ್ ಮಾಡಿದ್ದು, ಈ ದುಃಖವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಭಾವೋದ್ರಿಕ್ತರಾದರು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ಆತ್ಮೀಯ ಸಾಂತ್ವನ ಸಲ್ಲಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತೀವ್ರ ವಿಷಾದ ವ್ಯಕ್ತಪಡಿಸಿ, ತಕ್ಷಣ ಪರಿಹಾರ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಿದರು. ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ₹1 ಲಕ್ಷ ಸಹಾಯ ಘೋಷಣೆ ಮಾಡಿದರು. ಘಟನೆಯ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಅರುಣ ಜಗದೀಶನ್ ನೇತೃತ್ವದ ಸಮಿತಿ ನೇಮಕಗೊಂಡಿದೆ.

ಇದೇ ವೇಳೆ ಸ್ಟಾಲಿನ್ ಅವರು, “ಈ ಕ್ಷಣದಲ್ಲಿ ರಾಜಕೀಯ ಟೀಕೆ ಮಾಡುವುದು ಸೂಕ್ತವಲ್ಲ. ಬಾಧಿತರಿಗೆ ನೆರವು ನೀಡುವುದು ಮುಖ್ಯ. ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು. ವಿಜಯ್ ಬಂಧನದ ಕುರಿತು ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಘಟನೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಕೋರಿದ್ದು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

Karur Vijay Rally stampede Tragedy, 38 Dead

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories