ಉಜ್ಬೇಕಿಸ್ತಾನದಲ್ಲಿ ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು! ಸಮಗ್ರ ತನಿಖೆಗೆ ಕುಟುಂಬದ ಆಗ್ರಹ
ಉಜ್ಬೇಕಿಸ್ತಾನದಲ್ಲಿ ಮೃತಪಟ್ಟ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಯ ಸಾವಿನ ಹಿಂದೆ ಗಂಭೀರ ಸಂಚು ಇರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಸಮಗ್ರ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಕುಟುಂಬ ಒತ್ತಾಯಿಸಿದೆ.

Uzbekistan Kerala Student Death: ಉಜ್ಬೇಕಿಸ್ತಾನದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಕೇರಳ ಮೂಲದ 21 ವರ್ಷದ ಭಾರತೀಯ ವಿದ್ಯಾರ್ಥಿನಿಯ ಸಾವಿನ ಪ್ರಕರಣ ಹೊಸ ಅನುಮಾನಗಳಿಗೆ ಕಾರಣವಾಗಿದೆ. ಆರಂಭದಲ್ಲಿ ಸಹಪಾಠಿಯೊಂದಿಗೆ ನಡೆದ ಘರ್ಷಣೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದ್ದರೂ, ಕುಟುಂಬ ಸದಸ್ಯರು ಈ ಪ್ರಕರಣದ ಹಿಂದೆ ದೊಡ್ಡ ಸಂಚು ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವಿದ್ಯಾರ್ಥಿನಿಯ ಪಾರ್ಥಿವ ಶರೀರವನ್ನು ಕೇರಳಕ್ಕೆ ತರಿಸಿದ ಬಳಿಕ, ದೇಹದ ಹಲವು ಭಾಗಗಳಲ್ಲಿ ಗಾಯಗಳ ಗುರುತುಗಳು ಕಂಡುಬಂದಿವೆ ಎಂದು ಕುಟುಂಬ ಆರೋಪಿಸಿದೆ. ಒಂದು ಕ್ಷಣದ ಹಲ್ಲೆಯಿಂದ ಈ ರೀತಿ ಗಾಯಗಳಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದು, ಪ್ರಕರಣದ ಕುರಿತು ಸಂಪೂರ್ಣ ಸತ್ಯ ಹೊರಬರಬೇಕೆಂದು ಒತ್ತಾಯಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇರಳದ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿಯೊಂದಿಗೆ ನಡೆದ ವಾಗ್ವಾದದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಘಟನೆಯ ನಿಜಸ್ವರೂಪವನ್ನು ಪತ್ತೆಹಚ್ಚಲು ಸಂಪೂರ್ಣ ತನಿಖೆ ಅಗತ್ಯ ಎಂದು ಕುಟುಂಬದವರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಪ್ರಕರಣದಲ್ಲಿ ಧರ್ಮಾಂತರದ ಒತ್ತಡದ ಆರೋಪವನ್ನೂ ಕುಟುಂಬ ಸದಸ್ಯರು ಮುಂದಿಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ತನಿಖೆಯಲ್ಲಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಕೇರಳದಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ಮರುನಡೆಸಲಾಗಿದೆ.
ಪ್ರಕರಣದ ಸಂಪೂರ್ಣ ತನಿಖೆ ಭಾರತದಲ್ಲಿಯೂ ನಡೆಯಬೇಕು ಹಾಗೂ ಅಗತ್ಯವಿದ್ದರೆ ಆರೋಪಿಯನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.



