ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, 8 ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ
ಕೇರಳದ ತ್ರಿಶೂರ್‌ನಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಮಿಳುನಾಡಿನ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ
- 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು
- ತಮಿಳುನಾಡಿನ ವಿದ್ಯಾರ್ಥಿಗಳ ದುರ್ಮರಣ
ಕೇರಳದ (Kerala) ತ್ರಿಶೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Road Accident) ಎಂಟು ಕುಟುಂಬಗಳನ್ನು ಶೋಕದಲ್ಲಿ ಮುಳುಗಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೈಪಮಂಗಲಂ ಸಮೀಪದ ಪಣಂಬಿಕ್ಕುನ್ನು ಬಳಿ ಶುಕ್ರವಾರ ತಡರಾತ್ರಿ ಈ ದುರಂತ ನಡೆದಿದೆ. ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಅತಿವೇಗವಾಗಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ತಮಿಳುನಾಡಿನ ದಿಂಡಿಗಲ್‌ನ ಪಿಎಸ್‌ಎನ್‌ಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು (Engineering Students) ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪ್ರವಾಸಕ್ಕಾಗಿ ಕೇರಳಕ್ಕೆ ಬಂದಿದ್ದ ವಿದ್ಯಾರ್ಥಿಗಳು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಕೊಡುಂಗಲ್ಲೂರು ಕಡೆಗೆ ಪ್ರಯಾಣಿಸುತ್ತಿದ್ದರು.
ರಾತ್ರಿ ಸುಮಾರು 11.40ರ ವೇಳೆಗೆ ಪಣಂಬಿಕ್ಕುನ್ನು ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ರಭಸವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕಾರು ಲಾರಿಯ ಹಿಂಭಾಗದ ಕೆಳಗೆ ನುಗ್ಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ವಾಹನದ ಸ್ಥಿತಿ ತೀವ್ರವಾಗಿ ಹಾನಿಗೊಳಗಾಗಿದ್ದರಿಂದ ಮೃತದೇಹಗಳನ್ನು ಹೊರತೆಗೆಯುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿತ್ತು. ಪೊಲೀಸರು (Police), ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಗ್ಯಾಸ್ ಕಟ್ಟರ್ (Gas Cutter) ಸಹಾಯದಿಂದ ಕಾರಿನ ಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ನಂತರ ಮೃತದೇಹಗಳನ್ನು ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಿದ್ಯಾರ್ಥಿಗಳ ಗುರುತು ಪತ್ತೆಯಾದ ಬಳಿಕ ತ್ರಿಶೂರ್ ಪೊಲೀಸರು ತಮಿಳುನಾಡಿನ ದಿಂಡಿಗಲ್ ಜಿಲ್ಲಾಡಳಿತ ಹಾಗೂ ಕಾಲೇಜು ಆಡಳಿತವನ್ನು ಸಂಪರ್ಕಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಈ ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳ ನಿಲುಗಡೆ ಮತ್ತು ರಾತ್ರಿ ವೇಳೆಯ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಸೂಕ್ತ ಸೂಚನಾ ಫಲಕಗಳು, ಪಾರ್ಕಿಂಗ್ ದೀಪಗಳು ಇಲ್ಲದೆ ರಸ್ತೆಬದಿಯಲ್ಲಿ ಲಾರಿಗಳನ್ನು ನಿಲ್ಲಿಸುವುದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದರ ನಡುವೆ ಎನ್‌ಎಚ್ 66ರ ಆರು ಪಥದ ರಸ್ತೆ (NH 66) ಅಗಲೀಕರಣ ಕಾಮಗಾರಿಯೂ ಹಲವು ಕಡೆ ನಡೆಯುತ್ತಿದೆ. ರಸ್ತೆ ತಿರುವುಗಳು, ಸಮರ್ಪಕ ಬೆಳಕಿನ ಕೊರತೆ ಮತ್ತು ರಸ್ತೆಬದಿ ಭಾರೀ ವಾಹನಗಳ ನಿಲುಗಡೆ ಅಪಘಾತದ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೈಪಮಂಗಲಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯ ಸೇರಿದಂತೆ ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.



