ದೆಹಲಿ ಶಾಲೆಯಲ್ಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು ಇರುವ ಶಂಕೆ, ಚುರುಕುಗೊಂಡ ತನಿಖೆ
ದೆಹಲಿಯ ರೋಹಿಣಿ ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ಖಲಿಸ್ತಾನಿ ನಂಟು ಇದೆ ಎಂಬ ಶಂಕೆ ವ್ಯಕ್ತವಾಗಿದೆ
ನವದೆಹಲಿ: ದೆಹಲಿಯ ರೋಹಿಣಿ ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು ಗೊತ್ತೇ ಇದೆ. ಸ್ಫೋಟಕ್ಕೆ ಸಂಬಂಧಿಸಿದ ಟೆಲಿಗ್ರಾಮ್ ಆ್ಯಪ್ ಸಂದೇಶದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಫೋಟಕ್ಕೆ ಖಲಿಸ್ತಾನಿ ನಂಟು ಇದೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಭಾನುವಾರ ಶಾಲೆಯ ಗೋಡೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಆದರೆ ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಸೂಚನಾ ಫಲಕಗಳು, ಹೋರ್ಡಿಂಗ್‌ಗಳು, ಅಂಗಡಿಗಳು ಮತ್ತು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟದ ಸ್ಥಳದಲ್ಲಿ ಪೊಲೀಸರು ಬಿಳಿ ಪುಡಿಯನ್ನು ಪತ್ತೆ ಮಾಡಿದ್ದಾರೆ. ಈ ವಿಷಯವನ್ನು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಅಪರಿಚಿತ ಸ್ಫೋಟಕ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಫೋಟದ ಹಿಂದಿನ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.
ಭಾರತೀಯ ಏಜೆಂಟರು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ರತೀಕಾರದ ದಾಳಿ ನಡೆಸಲಾಗಿದೆ ಎಂಬ ಪೋಸ್ಟ್ ಟೆಲಿಗ್ರಾಮ್ ಆಪ್ ನಲ್ಲಿ ವೈರಲ್ ಆಗುತ್ತಿದೆ.
ಸ್ಫೋಟದ ಹಿಂದೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕೈವಾಡವಿದೆ ಎಂದು ನಂಬಲಾಗಿದೆ. ಪೋಸ್ಟ್ ರಚಿಸಿದ ಗುಂಪಿನ ವಿವರಗಳನ್ನು ಬಹಿರಂಗಪಡಿಸುವಂತೆ ಟೆಲಿಗ್ರಾಮ್‌ಗೆ ಪತ್ರ ಬರೆದಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.
Khalistan Terror Link To Rohini School Blast Delhi Police To Probe Telegram Post