ಕುರುಕ್ಷೇತ್ರದಲ್ಲಿ ಭೀಕರ ಕೊಲೆ: ಪತಿಯ ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ
ಕುರುಕ್ಷೇತ್ರದಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ ಪತಿಯ ಅಂಗಾಂಗಗಳು ಕಾಣೆಯಾಗಿರುವುದು ತನಿಖೆಗೆ ಹೊಸ ತಿರುವು ನೀಡಿದ್ದು, ಅಂಧಶ್ರದ್ಧೆ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೆಹೋವಾ ರಸ್ತೆಯ ಬಾಡಿಗೆ ಮನೆಯಲ್ಲಿ ಉತ್ತರ ಪ್ರದೇಶ ಮೂಲದ ರಾಜೇಶ್ ಮೃತಪಟ್ಟಿದ್ದು, ಅವರ ಪತ್ನಿ ವಿಮಲಾ ದೇವಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಘಟನೆ ವೇಳೆ ಮೃತದೇಹದ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆದು ಚೀಲಕ್ಕೆ ತುಂಬುತ್ತಿದ್ದಾಗ ಮನೆ ಮಾಲೀಕನ ಕಣ್ಣಿಗೆ ಈ ದೃಶ್ಯ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಿಂದ ಗಲಾಟೆಯ ಶಬ್ದ ಕೇಳಿ ಟೆರೇಸ್‌ಗೆ ಬಂದ ಮನೆ ಮಾಲೀಕ ರಿಂಕು, ಅಲ್ಲಿ ನಡೆದಿದ್ದ ಭೀಕರ ದೃಶ್ಯವನ್ನು ಕಂಡಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಗಾಬರಿಗೊಂಡ ವಿಮಲಾ ದೇವಿ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ. ಜಿಗಿತದಿಂದ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣದ ತನಿಖೆಗೆ ಮತ್ತಷ್ಟು ಕುತೂಹಲ ಮೂಡಿಸಿರುವುದು ಮರಣೋತ್ತರ ಪರೀಕ್ಷೆಯ ವರದಿ. ರಾಜೇಶ್‌ನ ಹೊಟ್ಟೆಯನ್ನು ಹರಿತವಾದ ಆಯುಧದಿಂದ ಸುಮಾರು 35 ಸೆಂಟಿಮೀಟರ್‌ಗಳಷ್ಟು ಸೀಳಲಾಗಿದ್ದು, ಕರುಳನ್ನು ಹೊರತೆಗೆದಿರುವುದು ಪತ್ತೆಯಾಗಿದೆ. ಅಲ್ಲದೆ, ಯಕೃತ್ತಿನ ಬಹುಪಾಲು ಭಾಗ ಹಾಗೂ ಬಲ ಮೂತ್ರಪಿಂಡ ಕಾಣೆಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಘಟನಾ ಸ್ಥಳದಿಂದ ರಕ್ತದ ಕಲೆ ಹೊಂದಿದ್ದ ಮೂರು ವಿಭಿನ್ನ ಗಾತ್ರದ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಆಯುಧಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ರಾಜೇಶ್ ಮತ್ತು ವಿಮಲಾ ದೇವಿಗೆ ಹಲವು ವರ್ಷಗಳಿಂದ ಮಕ್ಕಳಿರಲಿಲ್ಲ ಎನ್ನಲಾಗಿದ್ದು, ವಿಮಲಾ ಸಾಂಪ್ರದಾಯಿಕ ಚಿಕಿತ್ಸೆ, ಮಾಟಮಂತ್ರ ಹಾಗೂ ಭೂತೋಚ್ಚಾಟನೆ ರೀತಿಯ ಪದ್ಧತಿಗಳಲ್ಲಿ ತೊಡಗಿಸಿಕೊಂಡಿದ್ದಳು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೀಗಾಗಿ ಇದು ದಾಂಪತ್ಯ ಕಲಹದಿಂದ ನಡೆದ ಕೊಲೆಯೇ ಅಥವಾ ಅಂಧಶ್ರದ್ಧೆ ಮತ್ತು ಮಾಟಮಂತ್ರದ ಹಿನ್ನೆಲೆಯಲ್ಲಿನ ಕೃತ್ಯವೇ ಎಂಬ ಪ್ರಶ್ನೆ ತನಿಖಾಧಿಕಾರಿಗಳ ಮುಂದಿದೆ. ಕುರುಕ್ಷೇತ್ರ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡವು ಘಟನೆಯ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಕಾಣೆಯಾಗಿರುವ ಅಂಗಾಂಗಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.



