Ajit Pawar: ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಅಪಘಾತ, ಡಿಸಿಎಂ ಅಜಿತ್ ಪವಾರ್ ಸಾವು
ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಯಾಣಿಕರು ಮೃತಪಟ್ಟಿದ್ದು, ಸರ್ಕಾರ ತನಿಖೆ ಆರಂಭಿಸಿದೆ
- ಅಜಿತ್ ಪವಾರ್ ವಿಮಾನ ಅಪಘಾತ
- ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಪತನ
- ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಾವು
Ajit Pawar Death: ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ ವಿಮಾನ ಅಪಘಾತದಲ್ಲಿ (Plane Crash) ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Maharashtra DCM Ajit Pawar) ಸೇರಿ ಐವರು ಮೃತಪಟ್ಟಿದ್ದು, ಈ ದುರಂತ ರಾಜ್ಯದ ರಾಜಕೀಯ ವಲಯವನ್ನು ತೀವ್ರವಾಗಿ ದುಃಖದಲ್ಲಿ ಮುಳುಗಿಸಿದೆ.
ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ರಾಜಕೀಯ ಸಮಾರಂಭಗಳಿಗಾಗಿ ಮುಂಬೈದಿಂದ ಬಾರಾಮತಿಗೆ Charter Flightನಲ್ಲಿ ಪ್ರಯಾಣಿಸುತ್ತಿದ್ದರು.
ವಿಮಾನ ರನ್ವೇ ಸಮೀಪವೇ ಕುಸಿದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿಕೊಂಡಿತು. ಅಪಘಾತದ ತೀವ್ರತೆ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ಸ್ಥಳದಲ್ಲಿದ್ದ ದೃಶ್ಯಗಳು ಹೇಳುತ್ತವೆ.
ಅಧಿಕೃತ ಮಾಹಿತಿಯ ಪ್ರಕಾರ, ಅಪಘಾತದ ವೇಳೆ ವಿಮಾನದಲ್ಲಿ ಐವರು ಇದ್ದರು. ಇವರಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ, ಒಬ್ಬ ಸಹಾಯಕ ಹಾಗೂ ಇಬ್ಬರು ವಿಮಾನ ಸಿಬ್ಬಂದಿ ಸೇರಿದ್ದಾರೆ. ಡಿಜಿಸಿಎ (DGCA) ಮೂಲಗಳು, ಅಪಘಾತದಿಂದ ಯಾರೂ ಬದುಕುಳಿಯಲಿಲ್ಲ ಎಂದು ದೃಢಪಡಿಸಿವೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ಬಾರಾಮತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮತ್ತು ಶೋಕ ವಾತಾವರಣ ಆವರಿಸಿತು.
ಜಿಲ್ಲಾ ಪರಿಷತ್ ಚುನಾವಣಾ ಹಿನ್ನೆಲೆ, ಬಾರಾಮತಿಯಲ್ಲಿ ನಡೆಯುತ್ತಿದ್ದ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಮುಂಬೈಯಿಂದ ವಿಶೇಷ ವಿಮಾನದಲ್ಲಿ ಹೊರಟಿದ್ದರು. ಆದರೆ ಗಮ್ಯಸ್ಥಾನ ತಲುಪುವ ಮುನ್ನವೇ ಈ ದುರಂತ ಸಂಭವಿಸಿತು.
ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಅಪಘಾತದ ಕಾರಣ ಪತ್ತೆಹಚ್ಚಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಉನ್ನತ ಮಟ್ಟದ ತನಿಖೆ ನಡೆಸುವ ಸಾಧ್ಯತೆ ಇದೆ. ತಾಂತ್ರಿಕ ದೋಷವೇ ಕಾರಣವೇ ಅಥವಾ ಬೇರೆ ಅಂಶಗಳೂ ಇದಕ್ಕೆ ಕಾರಣವೇ ಎಂಬುದರ ಕುರಿತು ಪರಿಶೀಲನೆ ನಡೆಯಲಿದೆ.
ಅಜಿತ್ ಪವಾರ್ ಅವರ ಅಕಾಲಿಕ ನಿಧನ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಆಘಾತ ಮೂಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಭಾ ಸ್ಥಳಗಳು, ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳತ್ತ ಧಾವಿಸಿದರು.
ಅಜಿತ್ ಪವಾರ್ ರಾಜಕೀಯ ಪಯಣ
ಶರದ್ ಪವಾರ್ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಕಾಲಿಟ್ಟ ಅಜಿತ್ ಪವಾರ್, ನಾಲ್ಕು ದಶಕಗಳ ಕಾಲ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕರಾಗಿ ಗುರುತಿಸಿಕೊಂಡಿದ್ದರು. 1959 ಜುಲೈ 22ರಂದು ಜನಿಸಿದ ಅವರು, ಬಾರಾಮತಿ ಕ್ಷೇತ್ರವನ್ನು ತಮ್ಮ ರಾಜಕೀಯ ಕೋಟೆಯಾಗಿ ರೂಪಿಸಿಕೊಂಡಿದ್ದರು.
ಅವರು ಏಳು ಬಾರಿ ಶಾಸಕರಾಗಿ, ಆರು ಬಾರಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೀರಾವರಿ, ಹಣಕಾಸು, ಯೋಜನೆ, ಇಂಧನ ಸೇರಿದಂತೆ ಹಲವು ಮಹತ್ವದ ಇಲಾಖೆಗಳನ್ನು ನಿಭಾಯಿಸಿದ ಅನುಭವ ಅವರಿಗೆ ಇತ್ತು. ಸಹಕಾರ ಕ್ಷೇತ್ರದಲ್ಲಿಯೂ ಅವರ ಪ್ರಭಾವ ಗಮನಾರ್ಹವಾಗಿತ್ತು.








